ನಲುಗಿದ ಬದುಕು... ಮಂಕಾದ ಅರಿವಿನ ಮುಗಿಲು
ವಾರ್ಷಿಕ ಸರಾಸರಿ ೩೦೦೦ ಮಿಲಿ ಮೀಟರ್ ಮಳೆ ಬೀಳುವ, ೪೪ ನದಿಗಳನ್ನು ಹೊಂದಿರುವ ಕೇರಳ ಇಂದು ಕುಡಿಯುವ ನೀರಿನ ಸಮಸ್ಯೆಯಿಂದ ತೀವ್ರವಾಗಿ ತಲ್ಲಣಿಸುತ್ತಿದೆ. ಕಳೆದ ಚುನಾವಣೆಯಲ್ಲಿ ಶುದ್ಧ ಕುಡಿಯುವ ನೀರು ಒದಗಿಸುವುದೇ ಎಲ್ಲ ರಾಜಕೀಯ ಪಕ್ಷಗಳ ಪ್ರಣಾಳಿಕೆಯ ಮೊದಲ ಭರವಸೆ ಆಗಿತ್ತು. ಚುನಾವಣೆಯ ಸಂದರ್ಭದಲ್ಲಿ ೧೦,೦೦೦ ಕ್ಕೂ ಹೆಚ್ಚು ನೀರಿನ ಟ್ಯಾಂಕರ್ ಗಳನ್ನು ಕೇರಳದ ಉದ್ದಗಲಕ್ಕೆ ಹರಿದಾಡಿಸಿ ನೀರು ಹಂಚಿದ್ದರು ಮುಂಚೂಣಿ ನಾಯಕರು. ಹಾಗೆಯೇ ೨೦೦೭-೦೮ನೇ ಸಾಲಿನಲ್ಲಿ ಮಳೆಯ ಕೊರತೆಯಿಂದಾಗಿ ೨೮೪೪ ಕೋಟಿ ರೂಪಾಯಿಗಳಷ್ಟು ಕೇರಳ ರಾಜ್ಯ ನಷ್ಟ ಅನುಭವಿಸಿರುವುದಾಗಿ ಅಂದಾಜು ಮಾಡಲಾಗಿತ್ತು. ಇದು ಜಮ್ಮು ಕಾಶ್ಮೀರ ರಾಜ್ಯದ ೧ ವರ್ಷದ ಆಯವ್ಯಯ ಮೊತ್ತಕ್ಕೆ ಸಮ!
ಚಿತ್ರ ಕೃಪೆ: ದಿ ಹಿಂದೂ, ಪಿ ಟಿ ಐ
ದಕ್ಷಿಣ ಭಾರತದ ರಾಜ್ಯವೊಂದರ ಕಥೆ ಇದಾದರೆ ಉತ್ತರ ಭಾರತದ ಹಲವು ರಾಜ್ಯಗಳ ಪ್ರವಾಹ ಸಂಬಂಧಿ 'ಕಾದಂಬರಿ' ದೇವರಿಗೇ ಪ್ರೀತಿ. ಸಪ್ಟೆಂಬರ್ ತಿಂಗಳ ಮೂರನೇ ವಾರದಲ್ಲಿ ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ತೀವ್ರ ಮಳೆಯಾಗಿ ಒರಿಸ್ಸಾ ರಾಜ್ಯ ಅಕ್ಷರಶ: ನಡುಗಡ್ಡೆಯಂತಾಗಿ ಜನ-ಜಾನುವಾರು-ಪೀಕು ಎಲ್ಲರ ಬದುಕು ನೀರುಪಾಲಾಯಿತು. ಸತತವಾಗಿ ಸುರಿದ ಮಳೆಯಿಂದಾಗಿ ಒರಿಸ್ಸಾ ರಾಜ್ಯದ ೧೨ ಜಿಲ್ಲೆಗಳಲ್ಲಿ ಪ್ರವಾಹದ ಪರಿಸ್ಥಿತಿ. ನೆರೆ ಭೀತಿ ಆವರಿಸಿ, ೩೦ ಕ್ಕೂ ಹೆಚ್ಚು ಹಳ್ಳಿಗಳು ಜಲಾವೃತಗೊಂಡು ಅಪಾಯದ ಮಟ್ಟ ತಲುಪಿದವು.
ಪಿ.ಟಿ.ಐ. ಸುದ್ದಿ ಸಂಸ್ಥೆ ಕಳುಹಿಸಿದ ಛಾಯಾಚಿತ್ರವೊಂದು ದೈನಿಕದಲ್ಲಿ ಪ್ರಕಟಗೊಂಡು ನಮ್ಮೆಲ್ಲರ ಮನ ಕಲುಕಿತ್ತು. ಶೀರ್ಷಿಕೆ ಹೀಗಿತ್ತು. 'ಒರಿಸ್ಸಾದಲ್ಲಿ ಪ್ರವಾಹಕ್ಕೀಡಾದ ಕೇಂದ್ರಪಾದ ಜಿಲ್ಲೆಯ ಗರಡಪುರ ಗ್ರಾಮದ ಸಂತ್ರಸ್ತ ಮಹಿಳೆಯೋರ್ವಳು ಊಟಮಾಡುವಾಗ ಪಾತ್ರೆಯಲ್ಲಿನ ಅನ್ನ ತಿನ್ನಲು ಬಂದ ಮೇಕೆಯನ್ನು ದೂರ ತಳ್ಳಲು ಮನಸ್ಸು ಬಾರದಾಯಿತು.' ಓದುಗರ ಕಣ್ಣಾಲೆಗಳು ತೇವಗೊಂಡಿದ್ದವು.
ಚೋದ್ಯ ಎಂದರೆ..ಸೆಪ್ಟೆಂಬರ್ ೧೮ ರಂದು ಪ್ರವಾಹ ನಿರ್ವಹಣೆಗೆ ಸಭೆ ನಡೆದದ್ದು! ಅಲ್ಲಿಯವರೆಗೆ ಸಂಬಂಧಪಟ್ಟವರು ಹಾಸಿ-ಹೊದ್ದು ಸುಖ ನಿದ್ರೆಯಲ್ಲಿದ್ದರೆ? ಮಾಹಿತಿ ಮಾಧ್ಯಮಗಳಿಂದ ಲಭ್ಯವಾಗಲಿಲ್ಲ. ಕೋಸಿ ನದಿಯಲ್ಲಿ ಆಗಾಗ 'ಸಂಭವಿಸುವ' 'ಪ್ರವಾಹದ' ಸಮರ್ಥ ನಿರ್ವಹಣೆಗೆ ಭಾರತ ಹಾಗು ನೇಪಾಳ ಒಪ್ಪಿದ್ದು, ಕೃಷಿ ಮತ್ತು ವಿದ್ಯುತ್ ಉತ್ಪಾದನೆಗೆ ನೀರು ಬಳಸುವ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಎರಡೂ ದೇಶಗಳ ಉನ್ನತ ಅಧಿಕಾರಿಗಳು ಕಠ್ಮಂಡು ನಲ್ಲಿ ಈ ತಿಂಗಳು ಸಭೆ ಸೇರಿ ನಿರ್ಧರಿಸಲಿದ್ದಾರೆ ಎಂದು ಪಿ.ಟಿ.ಐ.ಸುದ್ದಿ ಸಂಸ್ಥೆ ವರದಿ ಮಾಡಿತ್ತು. ಬೇಸಿಗೆ ಕಾಲದಲ್ಲಿ ಇವರೇನು ಮಾಡುತ್ತಿದ್ದರು? ಗಡ್ಡಕ್ಕೆ ಬೆಂಕಿ ಹತ್ತಿದ ಕೂಡಲೇ ಬಾವಿ ತೋಡುವ ಈ ತರಾತುರಿಯ ತೋರಿಕೆಯ ತುರಿಕೆ ಮಾಧ್ಯಮಗಳ ಮುಂದೆ ಏಕೆ? ಅರ್ಥವಾಗಲಿಲ್ಲ.
ಆಗಲೇ ಈ ವಿಪರೀತ ಮಳೆಯಿಂದಾಗಿ ೧ ದಶಲಕ್ಷ ಜನ ನಿರಾಶ್ರಿತರಾಗಿದ್ದರು. ೧೧ ಜನ ಜಲ ಸಮಾಧಿಯಾಗಿದ್ದರು. ಇದು ಸರಕಾರಿ ಅಂಕಿ ಅಂಶ. ಒರಿಸ್ಸಾದಲ್ಲಿ ಹರಿಯುವ ಒಟ್ಟು ೧೧ ನದಿಗಳ ಪೈಕಿ ೯ ನದಿಗಳು ಆಗಲೇ ಅಪಾಯದ ಮಟ್ಟ ಮೀರಿ ರಭಸದಿಂದ ಹರಿಯ ಲಾರಂಭಿಸಿದ್ದವು. ರಸ್ತೆ ಸಂಪರ್ಕ, ವಿದ್ಯುತ್ ಸರಬರಾಜು ಎಲ್ಲ ಅಸ್ತವ್ಯಸ್ತ ಗೊಂಡಿತ್ತು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಪರಿಸ್ಥಿತಿ ಕೂಡಲೇ ವಿಕೋಪಕ್ಕೆ ತೆರಳಿ ಸಪ್ಟೆಂಬರ್ ೨೦ ರ ವೇಳೆಗೆ ಮಹಾನದಿಯ ಪ್ರವಾಹ ಉಕ್ಕಿ ೯ ಮಂದಿ ಕೊಚ್ಚಿಕೊಂಡು ಹೋದರು. ಉಕ್ಕೇರಿದ ನೀರಿನ ರಭಸದಿಂದಾಗಿ ಹಿರಾಕುಡ್ ಜಲಾಶಯಕ್ಕೆ ೪.೨ ಲಕ್ಷ ಕ್ಯುಸೆಕ್ಸ್ ನೀರು ಒಳ ಹರಿದು ಬರುತ್ತಿದೆ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಅಜಿತ್ ಕುಮಾರ್ ತ್ರಿಪಾಠಿ ಘೋಷಿಸಿದರು.
೩.೫೯ ಕ್ಯೂಸೆಕ್ಸ್ ಗಳಷ್ಟು ಹೆಚ್ಚುವರಿ ನೀರನ್ನು ಹೊರಗೆ ಬಿಟ್ಟ ಕಾರಣ ಸಂಭವಿಸಿದ ಪ್ರವಾಹದಲ್ಲಿ ಮತ್ತೆ ಕೊಚ್ಚಿ ಹೋಗಿ ಒರಿಸ್ಸಾದ ಕರಾವಳಿಯಲ್ಲಿ ೪ ಜನ ಸಾವನ್ನಪ್ಪಿದರು. ಮಹಾನದಿಯಲ್ಲಿ ಕಳೆದ ೭ ವರ್ಷಗಳ ಅವಧಿಯಲ್ಲಿ ಇಂತಹ ಭಯಂಕರ ಪ್ರವಾಹ ಕಂಡುಬಂದಿರಲಿಲ್ಲ ಎಂದು ಸರಕಾರಿ ದಾಖಲೆಗಳು ಸಾರಿ ಹೇಳಿದ್ದವು. ನದಿ ತೀರದ ಜಿಲ್ಲೆಗಳಲ್ಲಿ ಮುಳುಗಡೆಯ ಭೀತಿ ಒಂದೆಡೆ ಆವರಿಸಿದ್ದರೆ ಒರಿಸ್ಸಾದ ಪ್ರಮುಖ ನದಿಗಳಾದ ಸುವರ್ಣರೇಖಾ, ವೈತರಣಿ, ಬ್ರಹ್ಮನಿಗಳು ಸಹ ಅಪಾಯದ ಮಟ್ಟ ಮೀರಿ ಹರಿದವು. ಹಾಗಾಗಿ ಪ್ರವಾಹ ಬಾಧಿತ ಈ ಭಾಗದ ೧೨ ಜಿಲ್ಲೆಗಳ ೧ ದಶಲಕ್ಷ ಜನ ಮತ್ತೆ ಹೆಚ್ಚುವರಿಯಾಗಿ ಆತಂಕಿತರಾದರು.
ಈ ಮುಳುಗಡೆಯ ಭೀತಿ ಇರುವ ಪ್ರದೇಶಗಳಿಂದ ೩೦,೦೦೦ ಕ್ಕೂ ಹೆಚ್ಚು ಜನರನ್ನು ಸೇನೆಯ ಸಹಾಯದಿಂದ ಸುರಕ್ಷಿತ ಸ್ಥಳಗಳಿಗೆ ಸಾಗಿಸುವ ಹರಸಾಹದ ಕೆಲಸ ಆರಂಭವಾಯಿತು. ಯೋಜನೆಗಳನ್ನು ರೂಪಿಸುವವರು, ಅನುಷ್ಠಾನಗೊಳಿಸುವವರು ಸಕಾಲದಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ಸೇನೆ ಅದಕ್ಕೆ ತಕ್ಕ ಬೆಲೆ ತೆರಬೇಕು. ಇದು ನಮ್ಮ ದೇಶದಲ್ಲಿ ನಡೆದು ಬಂದ ಸಂಪ್ರದಾಯ. ಮುಸುಲಾಧಾರ ಮಳೆಯ ಆರ್ಭಟ ತಂಗುವ ಯಾವ ಲಕ್ಷಣಗಳೂ ಕಾಣಬರದಿದ್ದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ೨೧ರ ವೇಳೆಗೆ ಹಿಮಾಚಲ ಪ್ರದೇಶ, ಉತ್ತರ ಪ್ರದೇಶ ಹಾಗು ಒರಿಸ್ಸಾ ಸಹಿತ ಹಲವಾರು ಭಾಗಗಳಲ್ಲಿ ಸಂಭವಿಸಿದ ಭೂಕುಸಿತ, ಪ್ರವಾಹ ಹಾಗು ಕಟ್ಟಡ ಕುಸಿತದಂತಹ ಹತ್ತು ಹಲವು ದುರಂತಗಳಲ್ಲಿ ೧೦೦ ಕ್ಕೂ ಹೆಚ್ಚು ಮಂದಿ ಅಮಾಯಕರು ಪ್ರಾಣತೆತ್ತರು. ಸರಕಾರಿ ಪರಿಹಾರ ಬದುಕಿ ಉಳಿದವರಿಗೆ ಸದ್ಯದಲ್ಲಿಯೇ ಘೋಷಣೆಯಾಗಲಿದೆ. ಪಿ.ಸಾಯಿನಾಥ್ ಅವರು ಬರೆದ ಪುಸ್ತಕವೇ ಇದೆ.. 'ಎವರಿಬಡಿ ಲವ್ಸ್ ಅ ಗುಡ್ ಡ್ರಾಟ್' ! ಇಲ್ಲಿ ಅದು 'ಫ್ಲಡ್' ಆಗಬೇಕು ಅಷ್ಟೇ!
ಒರಿಸ್ಸಾದ ಪ್ರಮುಖ ನದಿಗಳ ಮುಂದುವರೆದ ಅಬ್ಬರದ ಹರಿವಿನಿಂದಾಗಿ ಲಕ್ಷಾಂತರ ಜನರು ಮತ್ತೆ ಕೆಲವೇ ತಾಸುಗಳಲ್ಲಿ ಜಲಾವೃತಗೊಂಡರು. ಮಹಾನದಿ ಉಕ್ಕಿ ಹರಿದು ೨೨ ಕಡೆಗಳಲ್ಲಿ ಆಣೆಕಟ್ಟಿನ ತಡೆಗೋಡೆ ಬಿರುಕು ಬಿಟ್ಟು, ಕೆಲವೆಡೆ ಒಡೆದು ಆತಂಕ ಇಮ್ಮಡಿಸಿತು. ರಕ್ಷಣೆ ಹಾಗು ಪರಿಹಾರ ಕಾರ್ಯಗಳಿಗೆ ಸೇನೆ ಸರ್ವ ಸನ್ನದ್ಧವಾಗಿ ಸಮರೋಪಾದಿಯಲ್ಲಿ ಕಾರ್ಯಾಚರಣೆಗಿಳಿಯಲು ಮುನ್ಸೂಚನೆ ರವಾನಿಸಲಾಯಿತು.
ಇತ್ತ ಪಶ್ಚಿಮ ಒರಿಸ್ಸಾದ ಹಿರಾಕುಡ್ ಜಲಾಶಯಕ್ಕೆ ಅಪಾರ ಪ್ರಮಣದಲ್ಲಿ ನೀರು ಹರಿದು ಬಂದು ಅಂಗುಲ್, ಕೇಂದ್ರಪಾದ, ಪುರಿ, ಕಟಕ್, ಜಗತ್ ಸಿಂಗ್ ಪುರ ಮತ್ತು ಜಾಜ್ ಪುರ್ ಜಿಲ್ಲೆಗಳು ತೀವ್ರ ಪ್ರವಾಹ ಪೀಡಿತವಾದವು. ಹಿರಾಕುಡ್ ಜಲಾಶಯದ ೬೪ ತೂಬುಗಳ ಪೈಕಿ ೪೬ನ್ನು ಅನಿವಾರ್ಯುವಾಗಿ ತೆರೆಯಲಾಯಿತು. ತನ್ಮೂಲಕ ೬.೯೩ ಲಕ್ಷ ಕ್ಯೂಸೆಕ್ಸ ನೀರನ್ನು ಹೊರಬಿಡಲಾಯಿತು. ಮಹಾನದಿಯ ಆಣೆಕಟ್ಟು ಒಡೆದಿರುವುದರಿಂದ ೧೫ ಜಿಲ್ಲೆಗಳ ಸುಮಾರು ೧೦ ಲಕ್ಷ ಜನ ತೀವ್ರ ಹಾನಿಗೆ ಒಳಗಾದರು.
ಒರಿಸ್ಸಾದ ಕಂದಾಯ ಮತ್ತು ಪ್ರಕೃತಿ ವಿಕೋಪ ನಿರ್ವಹಣಾ ಸಚಿವ ಸಮಲ್ ಪ್ರಕಾರ ಅಂದು ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ ೭. ಆದರೆ ಅನಧೀಕೃತ ಮೂಲಗಳ ಪ್ರಕಾರ ಸತ್ತವರ ಸಂಖ್ಯೆ ೧೩ ಮಿಕ್ಕಿತ್ತು! ೧೫ ಜಿಲ್ಲೆಗಳ ಸುಮಾರು ೪,೦೦೦ ಗ್ರಾಮಗಳು ಪ್ರವಾಹ ಪೀಡಿತವಾಗಿದ್ದು ಆಸ್ತಿ-ಪಾಸ್ತಿ, ಬೆಳೆಗಳಿಗೆ ಅಪಾರ ಹಾನಿಯಾಗಿ, ಸಾವಿರಾರು ಜಾನುವಾರುಗಳು ಪ್ರಾಣತೆತ್ತವು. ಸಾಂಕ್ರಾಮಿಕ ರೋಗಗಳು ಹರಡುವ ಹೊಸ ಭೀತಿ ಉದ್ಭವವಾಯಿತು. ೮,೦೦೦ ಕ್ಕೂ ಅಧಿಕ ಮನೆಗಳು ಧರಾಶಾಯಿಯಾದವು. ಜನರಿಗೆ ಮುಗಿಲೇ ಚಪ್ಪರವಾಗಿ ಪರಿಣಮಿಸಿತು.
ಕಳೆದ ೧೦ ವರ್ಷಗಳಲ್ಲಿ ಸುರಿದ ಭಾರಿ ಮಳೆ ಎಂಬ ದಾಖಲೆಗೆ ಇದು ಸೇರ್ಪಡೆಯಾಯಿತು. ಸೆಪ್ಟೆಂಬರ್ ೨೨ ರಂದು ಒರಿಸ್ಸಾದ ೧೭ ಪ್ರವಾಹ ಪೀಡಿತ ಜಿಲ್ಲೆಗಳ ಸ್ಥಿತಿ ಗಂಭೀರವಾಗಿಯೇ ಮುಂದುವರೆದು, ಸೇನಾ ಕಾರ್ಯಾಚರಣೆ ಚುರುಕುಗೊಳಿಸಲಾಯಿತು. ಆಹಾರದ ಪೊಟ್ಟಣಗಳು, ನೀರಿನ ಪೊಟ್ಟಣಗಳು, ಅಗತ್ಯ ಔಷಧಿಗಳನ್ನು ಹೆಲಿಕ್ಯಾಫ್ತರ್ ನಿಂದ ಕೆಳಗೆ ಬೀಳಿಸಲಾಯಿತು. ಜನ ಹಪಹಪಿಸಿ ಬಾಚಿಕೊಳ್ಳಲು ಕಿತ್ತಾಡುತ್ತಿದ್ದುದು ಎಂತಹವರ ಹೃದಯವನ್ನು ಕಲಕುತ್ತಿತ್ತು.
ಈ ಬಾರಿಯ ಪ್ರವಾಹವನ್ನು ಅಪರೂಪದ ನೈಸರ್ಗಿಕ ವಿಕೋಪ ಎಂದಿರುವ ಒರಿಸ್ಸಾ ಸರಕಾರದ ಹಿರಿಯ ಅಧಿಕಾರಿಯೋರ್ವರು, ೨೦ ಲಕ್ಷ ಜನ ನಿರಾಶ್ರಿತರಾಗಿದ್ದಾರೆ ಎಂದು ಅಂದಾಜಿಸಿದರು. ಅಪಾಯದ ಮಟ್ಟ ಮೀರಿ ಹರಿದ ಮಹಾನದಿ ಹಾಗು ಅದರ ಉಪನದಿಗಳು ಕನಿಷ್ಟ ೩೨ ಕಡೆಗಳಲ್ಲಿ ಬೃಹತ್ ಜನವಸತಿ ಪ್ರದೇಶಗಳಿಗೆ ನುಗ್ಗಿತು ಎಂಬುದು ಸರಕಾರಿ ಮಾಹಿತಿ. ಈ ಪ್ರವಾಹ ಸಂತ್ರಸ್ತ ಪ್ರದೇಶಗಳ ವೈಮಾನಿಕ ಸಮೀಕ್ಷೆ ಮಾಡಿದ ಮುಖ್ಯಮಂತ್ರಿ ಬೀಜು ಪಾಟ್ನಾಯಕ್, ಈ ಸಂಕಷ್ಟವನ್ನು 'ರಾಷ್ಟ್ರೀಯ ವಿಕೋಪ' ಎಂದು ಘೋಷಿಸಿ, ಪರಿಹಾರ ಕಾರ್ಯಗಳಿಗೆ ಹಾಗು ಶೀಘ್ಹ್ರ ಪುನರ್ವಸತಿಗಾಗಿ ತಕ್ಷಣವೇ ೧೫೦೦ ಕೋಟಿ ನೆರವು ನೀಡುವಂತೆ ಕೇಂದ್ರವನ್ನು ಆಗ್ರಹಿಸಿದರು.
ಕಳೆದ ೫೫ ವರ್ಷಗಳಲ್ಲಿಯೇ ಅತ್ಯಂತ ಹೆಚ್ಚು ಭೀಕರವಾದ ಪ್ರವಾಹ ಇದು. ಕಟಕ್ ಬಳಿ ನೀರಿನ ಒಳ ಹರಿವು ದಾಖಲೆಯ ಪ್ರಮಾಣ ೧೫.೮೧ ಲಕ್ಷ ಕ್ಯೂಸೆಕ್ಸ್ ಮುಟ್ಟಿದ್ದು, ೧೯೮೨ ರಲ್ಲಿ ದಾಖಲಾಗಿದ್ದು ೧೫.೮೦ ಲಕ್ಷ ಕ್ಯೂಸೆಕ್ಸ ಒಳಹರಿವನ್ನು ಮೀರಿಸಿದೆ ಎಂದು ಜಲ ಸಂಪನ್ಮೂಲ ಖಾತೆಯ ಮುಖ್ಯ ಇಂಜಿನೀಯರ್ ಸರಕಾರಕ್ಕೆ ತಿಳಿಸಿದ್ದಾರೆ. ೩೮ ಲಕ್ಷ ಜನ ಇಲ್ಲಿಯ ವರೆಗೆ ನಿರ್ಗತಿಕರಾಗಿದ್ದು, ೩.೫೦ ಲಕ್ಷ ಮನೆಗಳು ಹಾನಿಗೊಳಗಾಗಿವೆ. ೫೭ ಸಾವಿರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗಿದೆ.
ಮುನ್ನೆಲೆ: ಮೊದಲೇ ಎಚ್ಚೆತ್ತು ಕೊಳ್ಳಬೇಕಿದ್ದ ರಾಜ್ಯಾಡಳಿತ ತಡವಾಗಿ ಪ್ರತಿಕ್ರಿಯಿಸಿತು. ಕೇಂದ್ರದಲ್ಲಿ ಪ್ರಧಾನ ಮಂತ್ರಿಗಳು ನ್ಯೂಕ್ಲಿಯರ್ ಒಡಂಬಡಿಕೆಯ ಬಗ್ಗೆ ತೀವ್ರ ತಲೆ ಕೆಡಿಸಿಕೊಂಡು, ಅಮೇರಿಕೆ ಹಾಗು ಫ್ರಾನ್ಸ್ ದೇಶದ ಪ್ರವಾಸದಲ್ಲಿ ವ್ಯಸ್ತರಾಗಿದ್ದರು. ನಮ್ಮ ಮಾಜಿ ರಾಷ್ಟ್ರಪತಿ ಹಾಗು ವಿಜ್ನಾನಿ ಪ್ರೊ.ಎ.ಪಿ.ಜೆ.ಅಬ್ದುಲ್ ಕಲಾಂ ಅಂತರ್ ರಾಜ್ಯ ನದಿಗಳ ಜೋಡಣೆಗೆ ಕ್ರಿಯಾಯೋಜನೆ ತಯಾರಿಸಲು ಕರೆ ನೀಡಿದ್ದರು. ಜೀವ ವೈವಿಧ್ಯಕ್ಕೆ ಧಕ್ಕೆಯಾಗದಂತೆ ಉತ್ತರ ಭಾರತದ ನದಿಗಳನ್ನು ದಕ್ಷಿಣ ಭಾರತದ ನದಿಗಳನ್ನು ಜೋಡಿಸಿದ್ದೆ ಆದರೆ, ಈ ಮಹಾತ್ವಾಕಾಂಕ್ಷಿ ಯೋಜನೆ ಅನುಷ್ಠಾನಗೊಂಡಿದ್ದೇ ಆದರೆ, ಉತ್ತರ ಭಾರತದ ಪ್ರವಾಹ ಸದೃಶ ಸ್ಥಿತಿ ಹಾಗು ದಕ್ಷಿಣ ಭಾರತದ ಬರಗಾಲ ಪರಿಸ್ಥಿತಿ ನಿಭಾಯಿಸುವುದು ಸಾಧ್ಯ ಎಂದಿದ್ದರು. ಆ ಮಾತಿನ, ಈ ಯೋಜನೆಯ ಹಾಗು ಸಧ್ಯದ ಪರಿಸ್ಥಿತಿಯನ್ನು ಅವಲೋಕಿಸಿ ಸಾಧಕ-ಬಾಧಕಗಳನ್ನು ಇಂದಿಗಾದರೂ ನಾವು ಚಿಂತಿಸಬೇಕಿದೆ.
ಚಿಕೂನ್ ಗುನ್ಯಾ ಹಾಗು ಮಲೇರಿಯಾಗಿಂತ ಸಾರ್ಸ್ ರೋಗಕ್ಕೆ ಹೆಚ್ಚು ಮಹತ್ವ ನಮ್ಮ ಕೇಂದ್ರ ನೀಡುತ್ತದೆಯೇ ಕಾಯ್ದು ನೋಡಬೇಕಿದೆ. ಏಕೆಂದರೆ, ಮೊದಲು ಉಲ್ಲೇಖಿಸಿದ ಎರಡು ರೋಗಗಳು ಬರುವುದು ಬಡ-ಮಧ್ಯಮ ವರ್ಗದ ಜನರಿಗೆ, ಅದು ಶುಚಿತ್ವದ ಕೊರತೆಯಿಂದ. ಆದರೆ ಸಾರ್ಸ್ ವಿಮಾನದಲ್ಲಿ ನಿತ್ಯ ಹಾರಾಡುವ ಶ್ರೀಮಂತರಿಗೆ ಬರುವ ರೋಗ! ನಮ್ಮ ಪ್ರಾಧಾನ್ಯತೆಗಳು ಯಾವವು? ಮಾಧ್ಯಮಗಳು ಆಳುವವರನ್ನು ಎಚ್ಚರಿಸಲು ಇದು ಸಕಾಲ.
ಇಂದ,
ಹರ್ಷವರ್ಧನ ವಿ.ಶೀಲವಂತ
ಸಹಾಯಕ ಪ್ರಾಧ್ಯಾಪಕ
ಐ.ಎಂ.ಸಿ.ಆರ್. ಮಹಾವಿದ್ಯಾಲಯ, ಹುಬ್ಬಳ್ಳಿ- ೨೯
- 1290 reads
Email this page
Printer-friendly version
ಲೇಖಕರು
ವಿಶೇಷ ಬರಹಗಳು
ಇತ್ತೀಚಿನ ಬ್ಲಾಗ್ ಬರಹಗಳು
- ಫೊಟೊ ಅಲ್ಬಮ್
- ಗಣಿಗಾರಿಕೆಯಲ್ಲಿ- ತಡೆಆಣೆಕಟ್ಟು (ಚೆಕ್-ಡ್ಯಾ೦)
- ಪ್ರಥಮ್ ಬುಕ್ಸ್ ""ಕಾವೇರಿ" ಪುಸ್ತಕದ ಬಿಡುಗಡೆ ಮತ್ತು "ನಿಮ್ಮ ನದಿಯನ್ನು ಕಾಪಾಡಿ ನೀರನ್ನು ಉಳಿಸಿ" ಆಂದೋಲನ
- ಇಲ್ಲಿ ‘ಕೊಳಚೆ ನೀರು ಕುಡಿಯುವ ನೀರು’!`ಪಲ್ಸಡ್ ಪ್ಲೇಟ್' ತಂತ್ರಜ್ಞಾನ ಎಸ್.ಡಿ.ಎಂ. ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಗಳ ಆವಿಷ್ಕಾರ.
- ಮಳೆ ಬಂದರೆ ಬೆಂಗಳೂರಿಗೆ ಭೇದಿ
- ಮಳೆ ಎಂದರೆ ಬಾಲ್ಯದ ನೆನಪು ಕಣಾ...
- ನಾವು ವೃತ್ತಿ/ಕೆಲಸ ಮಾಡುವಲ್ಲಿ ನೀರಿನ ಮಿತಬಳಕೆಯ ಬಗ್ಗೆ ಜಾಗೃತಿ ಹೇಗೆ ಮೂಡಿಸಬಹುದು ?
- ರೇಡಿಯೋದಲ್ಲಿ K2K
- ಮಡಿವಾಳ ಕೆರೆಯ ಉಳಿಸಿ - ಒಂದು ಕೂಗು
- ಕೆರೆ ಕರಗುವ ಸಮಯ: ನಿಮಗಿದೋ ಆಮಂತ್ರಣ
ಇತ್ತೀಚಿನ ಪ್ರತಿಕ್ರಿಯೆ
- Re: ಬ್ಯಾಂಕ್ ಅಧಿಕಾರಿ ...
3 weeks 8 hours ago - Re: ಬ್ಯಾಂಕ್ ಅಧಿಕಾರಿ ...
6 weeks 5 days ago - Re: ವೃಷಭಾವತಿ ಎಂಬ ನದಿ ...
6 weeks 5 days ago - Re: ಟಾಯ್ಲೆಟ್ಗೆ ಫ್ಲಶ್ ...
23 weeks 2 days ago - Re: ಅಕ್ಷಯನಗರ ಕೆರೆಗೆ ...
23 weeks 2 days ago - Re: ವೃಷಭಾವತಿ ಎಂಬ ನದಿ ...
38 weeks 3 days ago - Re: ವೃಷಭಾವತಿ ಎಂಬ ನದಿ ...
38 weeks 5 days ago - Re: ವೃಷಭಾವತಿ ಎಂಬ ನದಿ ...
38 weeks 6 days ago - Re: ವೃಷಭಾವತಿ ಎಂಬ ನದಿ ...
38 weeks 6 days ago - Re: ವೃಷಭಾವತಿ ಎಂಬ ನದಿ ...
39 weeks 12 hours ago
| Subscribe to IWP Kannada list |
| Visit this group |











ಬರಹ ತುಂಬಾ ಪರಿಣಾಮಕಾರಿಯಾಗಿದೆ.
ವಿಷಯಗಳು ತುಂಬ ಚೆನ್ನಾಗಿರುತ್ತೆ. ಬಹಳ ವಿಷಯಗಳು ಪ್ರಸ್ತುತ ನಡೆಯುವ ವಿದ್ಯಾಮಾನಗಳನ್ನು ಹೊಂದಿರುತ್ತೆ. ಹಾಗು ನಮ್ಮ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿ ಹೆಚ್ಚಿನ ತಿಳುವಳಿಕೆ ಕೊಡುತ್ತದೆ. ಕನ್ನಡವು ವಿಶ್ವದಾದ್ಯಂತ ಕನ್ನಡಿಗರು ಬೆಳಸಲಿ ಎಂದು ಹಾರೈಸುತ್ತೇನೆ. ಎಲ್ಲ ಕನ್ನಡಿರಿಗೂ ನನ್ನ ಕಳಕಳಿ ಏನೆಂದರೆ ಹೆಚ್ಚು ಹಚ್ಚು ಕನ್ನಡ ಶಬ್ಧಗಳನ್ನು ಬಳಸಿ ಎಂದು ವಿಂತಿಸುತ್ತೇನೆ.
ನಾಗಭೂಷಣ. ಎಂ.ಎನ್
a very good article atleast from now onwards our irresponsible politicians should try to do the needful
The information is very effective. Even though we read all these news items in paper, here from your side the punch given by you is on the right side. Photos are very beautiful and attractive. We never felt that we are reading a news item, but a news with social content - demanding some commitment to carry over the fight. With regards, gundannack.
Post new comment