ನರೇಗಲ್ ಸಂಕನಗೌಡರ ಸಂಕಟ ಹರಣ ಮಾಡಿದ ಜಲಯೋಧ ಅಯ್ಯಪ್ಪ ಮಸಗಿ.

ನರೇಗಲ್ ಕಾಶಪ್ಪಗೌಡರ ತೋಟದಲ್ಲಿನ ಬೋರ್ ವೆಲ್ ನಲ್ಲಿ ನೀರು ಉಕ್ಕಿಸಿ ಬರ ನೀಗಿಸಿದ ಅಯ್ಯಪ್ಪ ಮಸಗಿ. ಜೊತೆಗೆ ಪ್ರಗತಿಪರ ಕೃಷಿಕ ಕಾಶಪ್ಪಗೌಡರು.

"ಸದರಿ ಎಂಬ ಹಳ್ಳಿ ದಿಲ್ಲಿಯಿಂದ ೪೮೦ ಕಿ.ಮೀ. ದೂರದೊಳಗದ. ಈ ಊರಿನೊಳಗ ಹನ್ನೆರೆಡು ಜನ ಹೆಂಡಂದಿರು ತಮ್ಮ ಗಂಡಂದಿರನ್ನ ಬಿಟ್ಟು ತವರಿಗೆ ಹೋಗ್ಯಾರ. ಈ ಊರಿಗೆ ಯಾರೂ ಈಗ ಹೆಣ್ಣು ಕೊಡಲಿಕ್ಕೆ ಮುಂದ ಬರೊದುಲ್ಲ. ನಶ್ಸೆ ಭಾಯಿ ಢಾಂಗೆ ಅನ್ನೊ ೩೫ರ ಹುಡುಗ ೫೦ ಸಾವಿರ ರುಪಾಯಿ ವಧುದಕ್ಷಿಣೆ ಕೊಟ್ಟು, ವಧುವಿನ ಕೊರಳಿಗೆ ತಾಳಿಕಟ್ಟಲಿಕ್ಕೆ ಕಳೆದ ೫ ವರ್ಷಗಳಿಂದ ಟೊಂಕಕಟ್ಟಿ ನಿಂತಾನ. ಇದಕ್ಕೆಲ್ಲ ಕಾರಣ ಗೊತ್ತ ಸರ್? ಹತ್ತಾರು ಕಿಲೋ ಮೀಟರ್ ದೂರದ ಗುಡ್ಡಗಾಡಿನಿಂದ ಅವರು ಕುಡಿಯುವ ನೀರು ಹೊತ್ತು ತರಬೇಕಾಗಿತ್ತು! ಇದನ್ನೆಲ್ಲ ಸರ್ಕಸ್ ಬಿಟ್ಟು ಮಳೆ ನೀರು ಹಿಡಿದು ಹಂಗ ಇಂಗಿಸಿದ್ರ, ಚೂರು ಕಾಳಜಿ ವಹಿಸಿ ಪ್ರಯತ್ನಿಸಿದ್ರ; ಶ್ರೀಮತಿಯರು ಬಂದ ಮ್ಯಾಲೆ ಇಲ್ಲಿನ ಮಹಾಶಯರಿಗೆ ಮತಿ ಬಂತು ಅನಬಹುದಾಗಿತ್ತು. ನಂತರದ ದಿನದೊಳಗ ಸುಂದರ ನಾರಿಮಣಿಯರು ಇವರ ಕೈ ಹಿಡಿತಿದ್ರು."

ನೀರ ಮಾನವ ಅಯ್ಯಪ್ಪ ಮಸಗಿ ನಮಗೆಲ್ಲ ಉದಾಹರಣೆಗಳ ಸಮೇತ ನೀರಿಂಗಿಸೋ ಮಹತ್ವ ಹೇಳತಾಇದ್ರು. ಜೊತೆಗೆ ನಾಲ್ಕಾರು ವರ್ಷಗಳಿಂದ ಇತ್ತೀಚೆಗೆ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ನರೇಗಲ್ ದೊಳಗೂ ‘ಸದರಿ’ ಹಳ್ಳಿ ಪರಿಸ್ಥಿತಿ ಇತ್ತು ಅಂತ ಹೋಲಿಕೆ ನೀಡತಾಇದ್ರು. ನಾನು ನನ್ನ ವಿದ್ಯಾರ್ಥಿಗಳೊಂದಿಗೆ ಈ ಹತ್ತಾರು ಹಳ್ಳಿಗಳಲ್ಲಿ ಆಗಿರುವ ಬದಲಾವಣೆ, ಅಯ್ಯಪ್ಪ ಮಾಡಿದ ಭಗೀರಥ ಪ್ರಯತ್ನ ತಿಳಿದುಕೊಳ್ಳೊ ತವಕದೊಳಗ ಒಂದು ಪ್ರವಾಸ ಮಾಡ್ತಿದ್ದೆ. ಅಮೇರಿಕೆಯಿಂದ ಭಾರತಕ್ಕ ಬಂದು ಇಲ್ಲಿನ ರೈತರೊಳಗ ನೀರಿನ ಹಿತ-ಮಿತ ಬಳಕೆಯ ಬಗ್ಗೆ ಅರಿವು ಮೂಡಿಸಲು ಹೆಣಗಿದ (ಕನ್ನಡಪ್ರಭ ವರ್ಷದ ವ್ಯಕ್ತಿ ೨೦೦೮ರ ಆಯ್ಕೆ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದ) ಲೆಸ್ಲಿ, ಇನ್ನೋರ್ವ ಪರಿಸರಪ್ರೇಮಿ ಜಾಬಶೆಟ್ಟಿ ನನ್ನೊಂದಿಗೆ ಇದ್ರು.

ನರೇಗಲ್ ಊರಿಗೆ ಹೋಗಿ ಇಳಿಯುತ್ತಲೆ ಅಲ್ಲಿನ ಪ್ರಗತಿಪರ ಕೃಷಿಕರಾದ ಕಾಶಪ್ಪಗೌಡ್ರು ಬಂದನಗೌಡ್ರು ಸಂಕನಗೌಡ್ರು ನಮ್ಮನ್ನ ಸ್ವಾಗತಿಸಿ, ತಮ್ಮ ದ್ರಾಕ್ಷಿ ತೋಟಕ್ಕ ಕರೆದುಕೊಂಡು ಹೋದ್ರು. ಜಲ ಯೋಧ ಅಯ್ಯಪ್ಪ ಮಸಗಿ ಅವರಿಗೆ ಸಾಕಷ್ಟು ಸಹಾಯ ಮಾಡಿ, ಅವರ ಕೃಷಿಯನ್ನ ಬರಗಾಲದಲ್ಲೂ ಬದುಕಿಸಿದ್ರು ಅಂತ ಮೆಚ್ಚುಗೆಯ ಮಾತುಗಳನ್ನ ಅವರು ಆಡಿದ್ರು.

ಕಳೆದ ೬೨ ವರ್ಷಗಳಿಂದ ಕೃಷಿಯಲ್ಲಿ ಕಾಶಪ್ಪಗೌಡ್ರು ತಮ್ಮನ್ನ ತೊಡಗಿಸಿಕೊಂಡಾರ. ೧೦ ಎಕರೆ ಭೂಮಿಯ ಒಡೆಯರು ಅವರು. ಮಿಶ್ರ ಬೇಸಾಯ ಪದ್ಧತಿಯೊಳಗ ಹಿಂಗಾರಿ-ಮುಂಗಾರಿ ಎರಡೂ ಪೀಕು ಪಡೆಯುವ ಭಗೀರಥ ಶ್ರಮ ಅವರದ್ದು. ಚಿಕ್ಕು, ಗೋವಿನ ಜೋಳ, ಹಬ್ಬ ಶೇಂಗಾ, ಹೆಸರು ಅವರ ಸಾಮಾನ್ಯವಾಗಿ ಬೆಳೆಯುವ ಬೆಳೆಗಳು. ೨ ರಿಂದ ೩ ತೆಂಗಿನ ಹಿಡಗಳು, ೨.೫ ಎಕರೆ ಭೂಮಿಯೊಳಗ ದ್ರಾಕ್ಷಿ ತೋಟ ಅವರು ಮಾಡ್ಯಾರ. ನೀರಿಗಾಗಿ ಕರಿ ಮಣ್ಣಿನ ಭೂಮಿಯೊಳಗ ಅವರು ಪಟ್ಟ ಪಾಡು ಕುಸಿದುಹೋಗುವಷ್ಟು.

ಕಾಶಪ್ಪಗೌಡ್ರು ಹೇಳಿದ್ರು.."೧೨-೧೩ ವರ್ಷಗಳ ಹಿಂದಕ ಮಹಾರಾಷ್ಟ್ರದ ಲಾತೂರ್ ಮತ್ತು ಕಿಲಾರದೊಳಗ ಭೂಕಂಪ ಆದಾಗ ಇದ್ದ ಒಂದು ಬೋರವೆಲ್ ಕರಿ ಮಣ್ಣಿನ ಭೂಮಿಯೊಳಗ ಕುಸದು ಹೂತು ಹೋತು. ಶುರುವಾತು ನೋಡ್ರಿ ನನ್ನ ಕಷ್ಟ. ೨೦೦ ಅಡಿ ಆಳಕ್ಕ ಬೋರ್ ಕೊರೆಸಿದ್ದೆ. ೧೨೦ ರಿಂದ ೧೫೦ ಅಡಿ ಆಳಕ್ಕ ಆಗ ನೀರು ಸಿಕ್ಕಿತ್ತು. ೧೪೦ ರಿಂದ ೧೬೦ ಅಡಿ ಆಳಕ್ಕ ಮೋಟಾರ್ ಕೂಡಿಸಿದ್ವಿ. ಹೀಂಗ ಜಗ್ಗಿದ್ವಿ, ೨೦೦೩ ರಿಂದ ೦೫ರ ವರಿಗೆನ ಈ ಭಾಗದ ಭೀಕರ ಬರಗಾಲ ಎಂಥಾ ಸ್ಥಿತಿವಂತ ರೈತನನ್ನೂ ಅಲುಗಾಡಿಸಿ ಬಿಟ್ತು." ನಿಟ್ಟುಸಿರು ಬಿಟ್ರು. 

ಅಯ್ಯಪ್ಪ ಮಾತು ಮುಂದೆವರೆಸಿ.."ನಾನು ಬಂದು ಗೌಡರ ಹೊಲದ ಪರಿಸ್ಥಿತಿ ನೋಡಿ ಒಂದು ಸಲಹೆ ಕೊಟ್ಟೆ. ನಾನು ಸರಕಾರದ ಸಬ್ಸಿಡಿ ಹಣ ತಂದು ತಮಗೊಂದು ಬೋರು ಅದಕ್ಕ ನೀರಿಂಗಿಸೋ ವ್ಯವಸ್ಥೆ ಮಾಡ್ತೀನಿ ಅಂತ. ಗೌಡರು ಹೇಳಿದ್ರು..ಅಯಪ್ಪ ನೀನು ನನಗ ರಕ್ತ ಸಂಬಂಧಿ. ಆದರೂ ನಂಬತೇನಿ. ಒಂದ ಲಕ್ಷ ನಿಂದು, ಒಂದುವರೆ ಲಕ್ಷ ರುಪಾಯಿ ನಂದು. ದಕ್ಕಿದರ ಸರಿ..ಇಲ್ದಿದ್ರ ಕಮತ ಇಲ್ಲಿಗೆ ಮುಗಿಸಿ ಬಿಡೋಣ ಅಂದ್ರು, ಒಪ್ಪಿದೆ. ಧೈರ್ಯ ಮಾಡಿ ಕೈಹಾಕಿದೆ. ೩ ವರ್ಷ ಸರಕಾರದ ಸಹಾಯ ಧನಕ್ಕಾಗಿ ಎಡತಾಕಿದೆ. ಸುಸ್ತಾದೆ. ಕೊನೆಗೆ ಕಾಶಪ್ಪಗೌಡ್ರು ನನ್ನ ಪರಿಸ್ಥಿತಿ ನೋಡಿ ತಮ್ಮ ಪಾಲಿನ ದುಡ್ಡು ಕೊಡಲಿಕ್ಕೆ ಮುಂದಾದರು. ಅಷ್ಟು ಹಣದೊಳಗ ಅನಿವಾರ್ಯವಾಗಿ ಸಣ್ಣ ಪ್ರೊಜೆಕ್ಟ ಹಮ್ಮಿಕೊಂಡ್ವಿ. ೮೫ ಘನ ಅಡಿಗಳ ಗುಂಡಿ ಜೊತೆಗೆ ಗುಂಡಿಯ ಆಳ ೧೮ ಅಡಿ".

ಆದರೆ, ಇಲ್ಲಿ ಕರಿ ಮಣ್ಣಿನ ಜೊತೆ ನೀರು ಸಹ ಹರಿದು ಬಂದು ಗುಂಡಿಗೆ ಸಾಗುತ್ತಿತ್ತು. ಹಾಗಾಗಿ ಅಯ್ಯಪ್ಪ ವಿಶೇಷವಾಗಿ ಫಿಲ್ಟರಿಂಗ್ (ನೀರು ಸೋಸಿ) ಬೋರ್ ವೆಲ್ ಗೆ ಇಳಿಯುವಂತೆ ಮಾಡಬೇಕಾದ ದೊಡ್ಡ ಸವಾಲು ಎದುರಿಸಿದರು. ಮೆಕ್ಯಾನಿಕಲ್ ಇಂಜಿನೀಯರಿಂಗ್ ನಲ್ಲಿ ಡಿಪ್ಲೊಮಾ ಪದವಿ ಪಡೆದ ಅಯ್ಯಪ್ಪ ತಲೆ ಓಡಿಸಿದರು. ತಾಂತ್ರಿಕವಾಗಿ ಅಪಾರ ಶ್ರಮವಹಿಸಿ ೧೩ ಅಡಿx ೧೩ ಅಡಿ ಅಗಲ ಹಾಗು ೪.೫ ಅಡಿ ಆಳ ಉಸುಕು ತುಂಬಿ, ನೆಲ ಮಟ್ಟದಿಂದ ಎತ್ತರದಲ್ಲಿ ಕೇಸಿಂಗ್ ಅಳವಡಿಸಲಾಯಿತು. ಮಣ್ಣಿನೊಂದಿಗೆ ಹರಿದು ಬರುವ ನೀರು ಸೋಸಿ, ೧೮ ಅಡಿ ಆಳದ ವರೆಗೆ ಹಾಗೆಯೇ ಸೋಸುತ್ತ ಹೋಗಿ ತಿಳಿಯಾದ ನೀರು ಬೋರವೆಲ್ ಸೇರುವಂತೆ ಜೋಡಿಸಿದರು. ಕೆಲ ಸಹಾಯಕರ ನೆರವಿನಿಂದ ಸಂಪೂರ್ಣ ತಾಂತ್ರಿಕ ಹೊಣೆ ಹೊತ್ತು ಅಯ್ಯಪ್ಪ ಈ ಕಾರ್ಯ ನೆರವೇರಿಸಿದರು. ಜೊತೆಗೆ ಅಳವಡಿಸಲಾದ ಫಿಲ್ಟರ್ ಗೆ ೨೦೦೦ ತೂತುಗಳನ್ನು ಕೊರೆದು ಕೇಸಿಂಗ್ ಪೈಪ್ ಗೆ ಸುತ್ತಲಾಗಿದೆ ಎಂದರೆ ಅಯ್ಯಪ್ಪ ತೆಗೆದುಕೊಂಡಿರುವ ಮುಂಜಾಗ್ರತೆ ಹಾಗು ಶ್ರಮ ನಮಗೆ ಅರ್ಥವಾಗುತ್ತದೆ.

೧೯೬೦ ರಿಂದ ೮೦ರ ದಶಕಗಳ ವರೆಗೆ ಕಾಶಪ್ಪಗೌಡ್ರು ಕೇವಲ ೬೫ ಫೂಟಿಗೆ ನೀರು ಪಡೆದು ಕೃಷಿಕಾಯಕ ನಡೆಸಿದ್ದನ್ನು ನೆನೆಯುತ್ತಾರೆ. ಹಾಗೆಯೇ ಬೋರವೆಲ್ ಗಳಿರಲಿಲ್ಲ ಕೇವಲ ತೆರೆದ ಬಾವಿಗಳಿಂದ ಇಡೀ ತೋಟ ಸಮೃದ್ಧವಾಗಿ ನಳನಳಿಸಿದ್ದನ್ನು ಅವರು ಸ್ಮರಿಸುತ್ತಾರೆ. ನಂತರ ನರೇಗಲ್ ಊರಿನಲ್ಲಿ ರೈತರು ಬಿಸಿಲಿನ ಬೇಗೆ, ನೀರಿನ ಬವಣೆ ತಾಳಲಾರದೆ ನೂರಾರು ಬೋರ್ ವೆಲ್ ಗಳನ್ನು ಕೊರೆಸಿದರು. ಹಾಗಂತ ಕಾಶಪ್ಪಗೌಡ್ರು ಹಿಂದೆ ಬೀಳಲಿಲ್ಲ ೧೯೮೦ರಲ್ಲಿ ಮೊದಲನೆ ಬೋರ್ ವೆಲ್ ಹಾಗು ೧೯೯೨ ರಲ್ಲಿ ೨ನೇ ಬೋರ್ ವೆಲ್ ಅವರು ಕೊರೆಸಿದರು. ಅಯ್ಯಪ್ಪ ೧೯೯೨ ರಲ್ಲಿ ಕೊರೆಸಿದ ಬೋರ್ ವೆಲ್ ಈಗ ರಕ್ಷಿಸಿ ತೋಟ ಬದುಕಿಸಿದ್ದಾರೆ. ಅಯ್ಯಪ್ಪ ಅವರ ಸಕಾಲಿಕ ಪ್ರಯತ್ನದಿಂದಾಗಿ ತೋಟದ ಈ ಬೋರ್ ವೆಲ್ ನಲ್ಲೊ ೯೦ ಅಡಿಗೆ ಈಗ ಮೋಟಾರ್ ಅಳವಡಿಸಲಾಗಿದೆ!  ೧ ಇಂಚು ಮಳೆ ಬಿದ್ದರೂ ಸಾಕು ಕಾಶಪ್ಪಗೌಡರ ತೋಟದ ಬೋರ್ ವೆಲ್ ಉಕ್ಕುತ್ತದೆ. ಹಾಗಾಗಿ ಪಕ್ಕದಲ್ಲಿರುವ ಹೊಲದ ಬಾವಿಗೂ ಈಗ ಸೆಲೆ ಉಕ್ಕುತ್ತಿದೆ. ಬೇಸಿಗೆಯಲ್ಲಿ ಸಂಪೂರ್ಣ ಬತ್ತಿರುತ್ತಿದ್ದ ತೆರೆದ ದೊಡ್ಡ ಬಾವಿ ಈಗ ಅರ್ಧದಷ್ಟು ನೀರು ಹೊಂದಿದೆ.

ಕಾಶಪ್ಪಗೌಡ್ರು ಈಗ ನರೇಗಲ್ಲಿನ ಗೌರವಾನ್ವಿತ, ಸ್ಥಿತಿವಂತ ಹಾಗು ಜಲಸಾಕ್ಷರ ರೈತರಲ್ಲಿ ಒಬ್ಬರು. ಕೇಳಿ ತಿಳಿದು, ಅನುಭವಿಸಿ ಅರಿತು ಒಳ್ಳೆಯ ಕೆಲಸಕ್ಕೆ ಬೆನ್ನು ತಟ್ಟಿ ಹುರಿದುಂಬಿಸುವ ಅವರ ಗುಣ ಅಯ್ಯಪ್ಪ ಅವರಂತಹ ಜಲ ಯೋಧರಿಗೆ ಪ್ರೇರಣಾದಾಯಿ, ನನ್ನಂತಹವರಿಗೆ ಅನುಕರಣೀಯ.

 

 

Post new comment

The content of this field is kept private and will not be shown publicly.
CAPTCHA
This question is for testing whether you are a human visitor and to prevent automated spam submissions.
9 + 2 =
Solve this simple math problem and enter the result. E.g. for 1+3, enter 4.