ಆದ್ರಿ ಮಳೆ ಹಬ್ಬ

ಆದ್ರಿ ಮಳೆ ಹಬ್ಬ

 

 

ಜೂನ್ ತಿಂಗಳಿನಲ್ಲಿ ಬರುವ ಆದ್ರಿ ಬಿರುಸಿನ ಮಳೆ. ಅದರಲ್ಲೂ ಮಲೆನಾಡಿನಲ್ಲಿ ಇದರ ಆರ್ಭಟ ವಿಪರೀತ. ನೆಲ-ಮುಗಿಲು ಒಂದಾಗುವಂತೆ ಸುರಿಯುವ ಈ ಮಳೆಯಲ್ಲಿ ಮಲೆನಾಡಿಗರು ವಿಶಿಷ್ಟ ಹಬ್ಬ ಆಚರಿಸುತ್ತಾರೆ. ದಂಡಾಡಿ ಬಂದವರಿಗೊಂದು ಎಡೆ ಇಡುವ ಈ ಹಬ್ಬದಲ್ಲಿ ಹಲಸಿನ ಹಣ್ಣು ಮತ್ತು ಕೋಳಿಸಾರು ವಿಶೇಷ ಭಕ್ಷ್ಯಗಳು. ಹೆಚ್ಚಾಗಿ ದೀವರ ಜನಾಂಗದವರು ಇದನ್ನು ಆಚರಿಸುತ್ತಾರೆ. ಇದು ಅವರಿಗೆ ಸಂಭ್ರಮದ ಆಚರಣೆ. ನೆಂಟರಿಷ್ಟರು, ಆಪ್ತರು, ಮದುವೆಯಾಗಿ ಹೋಗಿರುವ ಹೆಣ್ಣುಮಕ್ಕಳು ಹಬ್ಬಕ್ಕೆ ಬರುವುದರಿಂದ ಎಲ್ಲರ ಸಂಭ್ರಮ ದುಪ್ಪಟ್ಟಾಗುತ್ತದೆ. ಇದೊಂದು ಸಾಮೂಹಿಕ ಹಾಗೂ ಕೌಟುಂಬಿಕ ಆಚರಣೆ. ಈ ಹಬ್ಬ ಮಾಡುವ ಹೊತ್ತಿಗೆ ಹೊಲದಲ್ಲಿ ಬಿತ್ತನೆಯಾದ ಬೀಜ ಮೊಳಕೆಯೊಡೆದು ಸಸಿಯಾಗಿರುತ್ತದೆ.

 

ಹಬ್ಬದ ದಿನ ಊರ ಗಂಡುಮಕ್ಕಳು ಸುರಿವ ಮಳೆ, ರಭಸ ಗಾಳಿಯನ್ನೂ ಲೆಕ್ಕಿಸದೆ ಮುಖಕ್ಕೆ ಗ್ರಾಮದೇವತೆಯ ಹಾಗೂ ದೀವರ ದೈವವಾದ ಕುಮಾರರಾಮನ ಮುಖವಾಡ ಧರಿಸಿ ಬೀದಿ-ಬೀದಿಯಲ್ಲಿ ಮೆರವಣಿಗೆ ಹೊರಡುತ್ತಾರೆ. ತಂತಮ್ಮ ಮನೆ ಮುಂದೆ ಮೆರವಣಿಗೆ ಬಂದಾಗ ಹೆಣ್ಣುಮಕ್ಕಳು ಆರತಿ ಬೆಳಗುತ್ತಾರೆ. ಮೆರವಣಿಗೆಯ ಜೊತೆಯಲ್ಲೆ ನಡೆಯುವ ಯುವಕರ ಡೊಳ್ಳು ಕುಣಿತ ಮತ್ತೊಂದು ಪ್ರಮುಖ ಆಕರ್ಷಣೆ ಮತ್ತು ರೋಮಾಂಚನ ಹುಟ್ಟಿಸುವ ದೃಶ್ಯ. ಗುಡುಗಿನ ಸದ್ದನ್ನೂ ಮರೆಮಾಚುವ ಡೊಳ್ಳಿನ ಮೊರೆತ, ಕುಣಿತಗಾರರ ಲಯಬದ್ದ ಹೆಜ್ಜೆ, ಮುಗಿಲು ಮುಟ್ಟುವ ಕೇಕೆಯನ್ನು ನೋಡುವುದು ಒಂದು ಅಪೂರ್ವ ಅನುಭವ. ಕಾಲಡಿ ಹರಿಯುವ ಕೆನ್ನೀರು ಮುಗಿಲಿಂದ ಬೀಳುವ ಮಳೆ ಹನಿಗಳು ಹಬ್ಬಕ್ಕೆ ಮತ್ತಷ್ಟು ಮೆರುಗು ನೀಡುತ್ತವೆ. ಸುರಿವ ಮಳೆಯಲ್ಲಿ ಹಬ್ಬ ಮಾಡುವ ಕಲ್ಪನೆಯೇ ವಿಶಿಷ್ಟ.

 

ಮೆರವಣಿಗೆ ಮುಗಿದು ಪೂಜೆ ಮಾಡಿ ಭಕ್ತರು ತಮ್ಮ ಹರಕೆ ಪೂರೈಸುತ್ತಾರೆ. ಗ್ರಾಮದ ಒಳಿತನ್ನು ಕೋರಿ ಕುರಿ-ಕೋಳಿ ಬಲಿ ನೀಡಲಾಗುತ್ತದೆ.  ಅದೇ ದಿನ ಸಂಜೆ ನಡೆಯುವ ಮತ್ತೊಂದು ವಿಶೇಷ ಕ್ರಿಯೆ ಕೊಂಡ ಹಾಯುವುದು. ಈ ಕ್ರಿಯೆಗೆ ಬಿಂಗಿ ಎನ್ನುತ್ತಾರೆ. ನಿಗಿ-ನಿಗಿ ಹೊಳೆಯುವ ಕೆಂಡದ ರಾಶಿಯ ಮೇಲೆ ಭಕ್ತಾದಿಗಳು, ಡೊಳ್ಳು ಕುಣಿತಗಾರರು ಶ್ರದ್ಧೆಯಿಂದ ನಡೆಯುತ್ತಾರೆ. ಮಲೆನಾಡಿನ ಶ್ರೀಮಂತ ಜನಪದ ಪರಂಪರೆಯ ಪ್ರತೀಕ ಈ ಆದ್ರಿ ಮಳೆ ಹಬ್ಬ.

 

ಹಿಂದೆ ಈ ಹಬ್ಬ ಕುಮಾರರಾಮನ ವಿಜಯದ ಸಮ್ಕೇತವಾಗಿ ಆಚರಣೆಗೆ ಬಂದಿದೆ ಎಂಬ ಐತಿಹ್ಯವಿದ್ದರೂ ಸಹ ಕ್ರಮೇಣ ತನ್ನ ಸ್ವರೂಪ ಬದಲಿಸಿಕೊಂಡು ಈಗ ಗ್ರಾಮದ ಹಬ್ಬವಾಗಿ ಮಾರ್ಪಟ್ಟಿದೆ. ೧೩ ನೇ ಶತಮಾನದಲ್ಲಿ ಬಳ್ಳಾರಿಯ ಕಂಪ್ಲಿಯನ್ನು ಬೇಡರ ಅರಸ ಕುಮಾರರಾಮ ಆಳುತಿದ್ದ.  ಮೊಘಲ್ ದೊರೆಗಳ ಜೊತೆ ನಡೆದ ಕದನದಲ್ಲಿ ವೀರಾವೇಶದಿಂದ ಹೋರಾಡಿ ಮಡಿಯುತ್ತಾನೆ. ಮಲೆನಾಡಿನ ಹಳೆಪೈಕದವರು ಆತನ ಸೈನ್ಯದಲ್ಲಿರುತ್ತಾರೆ, ಅವರು ಕುಮಾರರಾಮನ ಮುಖವಾಡ ಮಾಡಿ ಪೂಜಿಸುವ ಕ್ರಿಯೆ ಶುರುಮಾಡುತ್ತಾರೆ. ಆದ್ರಿ ಮಳೆಯ ಸಂದರ್ಭದಲ್ಲಿ ಆಚರಿಸುವ ಈ ಹಬ್ಬದಲ್ಲಿ ಯುದ್ಧಕ್ಕೆ ಹೋಗುವ, ಬೆಂಕಿಗೆ ಹಾರುವ ಸಾಂಕೇತಿಕ ಆಚರಣೆಗಳನ್ನು ನಡೆಸುತ್ತಾರೆ. 

 

ಶಿವಮೊಗ್ಗ ಜಿಲ್ಲೆ ಸಾಗರ-ಸೊರಬ ತಾಲೂಕುಗಳಲ್ಲಿ ಈ ಹಬ್ಬದ ಖದರು ಜೋರು.

 

ಈ ರೀತಿ ಪ್ರತಿಯೊಂದು ಮಳೆಯ ಬಗೆಗೂ ಅದರದೇ ಆದ ನಂಬಿಕೆಗಳಿದ್ದು, ಕೆಲವು ಮಳೆಗಳ ಬಗ್ಗೆ ಸಾಮೂಹಿಕವಾದ ಮತ್ತು ವೈಯಕ್ತಿಕ ನೆಲೆಯ ಆಚರಣೆಗಳನ್ನು ಕಾಣಬಹುದು.

 

 

- ಮಲ್ಲಿಕಾರ್ಜುನ ಹೊಸಪಾಳ್ಯ

 

 

 

Post new comment

The content of this field is kept private and will not be shown publicly.