ಛಾವಣಿ ನೀರಿನಿಂದ ಫ್ಲೋರೈಡ್ ದೂರ
ಪಟ್ಟನಾಯಕನಹಳ್ಳಿಯ ನಾಗರಾಜು-ಲಲಿತಮ್ಮ ದಂಪತಿಗಳಿಗೆ ಈಗ ನೆಮ್ಮದಿ. ಬೆಳೆಯುವ ಮಗಳು ಮತ್ತು ವಯಸ್ಸಾಗಿದ್ದ ತಾಯಿ ಅನುಭವಿಸುತ್ತಿದ್ದ ಯಾತನೆಗೊಂದು ಮುಕ್ತಿ ಸಿಕ್ಕಿದೆ. ಆರ್ಥಿಕ ಹೊರೆ ಕಡಿಮೆಯಾಗುವುದರ ಜೊತೆಗೆ ಮಾನಸಿಕ ಕಿರಿ-ಕಿರಿ ದೂರವಾಗಿದೆ. ವರ್ಷಗಳಿಂದ ಅನುಭವಿಸುತ್ತಿದ್ದ ಖಾಯಿಲೆಗಳು ವಾಸಿಯೇ ಆಗುವುದಿಲ್ಲವೆಂದು ಭಯಗೊಂಡಿದ್ದವರಿಗೆ ಅತ್ಯಂತ ಸುಲಭವಾಗಿ ಪರಿಹಾರ ಲಭ್ಯವಾಗಿದೆ. ಅದಕ್ಕೆ ಕಾರಣ ಛಾವಣಿ ನೀರ ಸಂಗ್ರಹದಿಂದ!.
೧೦ ವರ್ಷದ ಮಗಳು
ಉಷಾಳಿಗೆ ಫೊರೊಸಿಸ್ನಿಂದಾಗಿ ಹಲ್ಲುಗಳು ಹಳದಿ ಬಣ್ಣಕ್ಕಿದ್ದವು. ೬೦ ಕ್ಕೂ ಹೆಚ್ಚು ವಯಸ್ಸಾಗಿದ್ದ ಲಲಿತಮ್ಮನವರ ತಾಯಿಗೆ ಸದಾ ಕೈಕಾಲು ನೋವು, ಮಂಡಿ ನೋವಿನಿಂದಾಗಿ ಸುಸ್ತು,
ನಿಶ್ಯಕ್ತಿ. ಕುಳಿತರೆ ಏಳಲಾಗದ, ಎದ್ದರೆ ಕೂರಲಾಗದ ಸ್ಥಿತಿ. ಯಾವ ವೈದ್ಯರಿಗೆ ತೋರಿಸಿದರೂ, ಎಂತಹ ಔಷಧಿ ಕೊಟ್ಟರೂ ಸುಧಾರಣೆಯಾಗದ ಪರಿಸ್ಥಿತಿ. ಇದಕ್ಕೆಲ್ಲಾ ಮೂಲ ಕಾರಣ ಅವರು ಕುಡಿಯುತ್ತಿದ್ದ ಫ್ಲೊರೈಡ್ ಅಂಶ ಹೆಚ್ಚಿನ ಪ್ರಮಾಣದಲ್ಲಿದ್ದ ನೀರು.
ಕಳೆದ ಒಂದು ವರ್ಷದಿಂದ ಈ ಸಮಸ್ಯೆಗಳಿಲ್ಲ. ಕಾರಣ ಆರಂಭದಲ್ಲೇ ಹೇಳಿದಂತೆ ಛಾವಣಿ ನೀರು ಸಂಗ್ರಹಿಸಿ ಕುಡಿಯುತ್ತಿರುವುದು. ಮಗಳ ಹಲ್ಲಿನ ಮೇಲಿದ್ದ ಹಳದಿ ಕರೆ ಗಣನೀಯವಾಗಿ ಕಡಿಮೆಯಾಗುತ್ತಿದೆ ಹಾಗೂ ಲಲಿತಮ್ಮನವರ ತಾಯಿ ಆರಾಮಾಗಿ ಓಡಾಡಿಕೊಂಡು ಕೆಲಸ ಮಾಡಿಕೊಂಡಿದ್ದಾರೆ.
ಪಟ್ಟನಾಯಕನಹಳ್ಳಿಯು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನಲ್ಲಿದೆ. ರಾಜ್ಯದಲ್ಲಿ ಅತಿ ಹೆಚ್ಚು ಫ್ರೊರೈಡ್ ಅಂಶಯುಕ್ತ ನೀರು ಹೊಂದಿರುವ ಪ್ರದೇಶಗಳಲ್ಲಿ ತುಮಕೂರು ಜಿಲ್ಲೆ ಸಹ
ಒಂದು. ಅದರಲ್ಲಿಯೂ ಜಿಲ್ಲೆಯ ಪಾವಗಡ, ಶಿರಾ ಮತ್ತು ಮಧುಗಿರಿ ತಾಲ್ಲೂಕುಗಳಲ್ಲಿ ಈ ಸಮಸ್ಯೆ ವಿಪರೀತ. ಲಭ್ಯ ಅಂಕಿ-ಅಂಶಗಳ ಪ್ರಕಾರ ಈ ಭಾಗದ ನೀರಿನಲ್ಲಿ ೫,೮ ಪಿಪಿಎಂನಷ್ಟು ಪ್ರಮಾಣದ ಫ್ಲೊರೈಡ್ ಅಂಶವಿದೆ. ಇದು ಅಪಾಯಕಾರಿ ಮಟ್ಟ. ಮಳೆ ನೀರನ್ನು ಭೂಮಿಗೆ ಹಿಂಗಿಸದೆ ಹೆಚ್ಚು-ಹೆಚ್ಚು ಅಂತರ್ಜಲ ಬಳಸಿದ ಪರಿಣಾಮವಿದು.
ಪಟ್ಟನಾಯಕನಹಳ್ಳಿ ಪ್ರದೇಶದಲ್ಲಿ ಕುಡಿಯುವ ನೀರಿಗೆ ಕೊಳವೆ ಬಾವಿಗಳೇ ಆಧಾರ. ಈ ನೀರಿನಲ್ಲಿ ೪.೮ ಪಿಪಿಎಂ ಪ್ರಮಾಣದ ಪ್ಜ್ಲೊರೈಡ್ ಅಂಶವಿದೆ. ಇತ್ತೀಚಿನ ವರ್ಷಗಳಲ್ಲಿ
ಮಳೆಯ ಪ್ರಮಾಣದಲ್ಲಾದ ಕುಂಠಿತ. ಕೆರೆ-ಕಟ್ಟೆಗಳಲ್ಲಿ ಹೂಳು ತುಂಬಿ ನೀರು ನಿಲ್ಲದಿರುವುದು ಫ್ಲೊರೈಡ್ ಅಂಶ ಹೆಚ್ಚಾಗಲು ಪ್ರಮುಖ ಕಾರಣಗಳು. ಹಾಗಾಗಿ ನಾಗರಾಜು-ಲಲಿತಮ್ಮನವರಂತೆ ಇಲ್ಲಿನ ಎಲ್ಲಾ ಕುಟುಂಬಗಳೂ ಹಲವಾರು ಸಮಸ್ಯೆ ಎದುರಿಸುತ್ತಿವೆ.
ಈ ಸಮಸ್ಯೆ ಪರಿಹಾರಕ್ಕಾಗಿ ಛಾವಣಿ ಸರ್ಕಾರವು ಫ್ಲೊರೊಸಿಸ್ ಸಮಸ್ಯೆ ಹೆಚ್ಚಿನ ಪ್ರಮಾಣದಲ್ಲಿರುವ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಸುವ ‘ಸಚೇತನ' ಯೋಜನೆ ಪ್ರಾರಂಭಿಸಿದ್ದು ಜಿಲ್ಲೆಯ ಶಿರಾ ಮತ್ತು ಪಾವಗಡ ತಾಲ್ಲೂಕುಗಳ ೩೧ ಗ್ರಾಮಗಳಲ್ಲಿ ಜಾರಿಗೊಳಿಸುತ್ತಿದ್ದು ಬೈಫ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು ಸಮುದಾಯ ಮಟ್ಟದಲ್ಲಿ
ಇದನ್ನು ಅನುಷ್ಠಾನಗೊಳಿಸುತ್ತಿದೆ. ಬೆಂಗಳೂರಿನ ಅರ್ಘ್ಯಂ ಸಂಸ್ಥೆಯು ಯೋಜನೆಯ ದಾಖಲಾತಿ ಮತ್ತು ಸಂಶೋಧನೆ ಜವಾಬ್ದಾರಿ ವಹಿಸಿಕೊಂಡಿದೆ.
ಯೋಜನೆ ಅನುಷ್ಠಾನದಲ್ಲಿ ಜನರ ಮನಪರಿವರ್ತನೆಯೇ ಹೆಚ್ಚಿನ ಅವಧಿ ತೆಗೆದುಕೊಳ್ಳುತ್ತದೆ ಎಂಬುದು ಬೈಫ್ನ ಅಧಿಕಾರಿ ವಿ.ಬಿ.ದ್ಯಾಸರವರ ಅನಿಸಿಕೆ. ಇದಕ್ಕೆ ದನಿಗೂಡಿಸುವ ಲಲಿತಮ್ಮನವರು " ಆರಂಭದಲ್ಲಿ ನಮಗೂ ಆಸಕ್ತಿ ಇರಲಿಲ್ಲ, ಆದ್ರೆ ಇವರ ನಿರಂತರ ಮನೆ ಭೇಟಿ, ಜಾಥಾ, ತರಬೇತಿಗಳಿಂದ ಪ್ರೇರಣೆ ಬಂತು" ಎನ್ನುತ್ತಾರೆ. ಇವರು ತಮ್ಮ ಹೆಂಚಿನ ಛಾವಣಿಗೆ ನೀರು ಸಂಗ್ರಹಣೆಗಾಗಿ ಪೈಪ್ ಜೋಡಣೆ ಮಾಡಿ ಮನೆಯ ಮುಂಭಾಗದಲ್ಲಿ ೫೦೦೦ ಲೀಟರ್ ಸಾಮರ್ಥ್ಯದ ನೀರು ಸಂಗ್ರಹಣಾ ತೊಟ್ಟಿ ನಿರ್ಮಾಣದಲ್ಲಿದ್ದಾಗ ಅಕ್ಕ-ಪಕ್ಕದವರು ಆಡಿಕೊಂಡು "ಮಳೆ ಬಂದಾಗ, ನೀವು ನೀರು ಕುಡ್ದಾಗ, ಇದೆಲ್ಲ ಆಗೋದಲ್ಲ ಹೋಗೋದಲ್ಲ" ಎಂದು ನಗುತ್ತಿದ್ದರಂತೆ. "ಈಗ ಅವರೇ ನಮ್ಮ ಮನೆಗೆ ಬಿಂದಿಗೆ ಹಿಡ್ಕೊಂಡು ನೀರಿಗೆ ಬರುತ್ತಾರೆ" ಎಂದು ಬಾಯ್ತುಂಬಾ ನಗುತ್ತಾರೆ ಲಲಿತಮ್ಮ.
೨೦೦೭ ನೇ ಇಸವಿಯ ಭರಣಿ ಮಳೆಯಿಂದಲೂ ಮಳೆ ನೀರನ್ನೇ ಬಳಸುತ್ತಿರುವ ಇವರಿಗೆ, ಮುಂಚೆ ಮುನಿಸಿಪಾಲಿಟಿಯವರು ಕೊಡುತ್ತಿದ್ದ ಕೊಳವೆ ಬಾವಿ ನೀರಿಗೂ ಮಳೆ ನೀರಿಗೂ ಇರುವ ವ್ಯತ್ಯಾಸ ಸ್ಪಷ್ಟವಾಗಿದೆ. ಮುನಿಸಿಪಾಲಿಟಿ ನೀರನ್ನು ಹಿಡಿದಿಟ್ಟ ಪಾತ್ರೆಗಳು ಕಪ್ಪಾಗುತ್ತಿದ್ದವು, ಬೆಳಿಗ್ಗೆ ನೀರು ಹಿಡಿದಿಟ್ಟರೆ ರಾತ್ರಿ ಹೊತ್ತಿಗೆಲ್ಲಾ ನೀರಿನ ಮೇಲೆ ಒಂದು ಪದರ
ಕೆನೆಗಟ್ಟುತ್ತಿತ್ತು. ಮುಖ್ಯವಾಗಿ ಆಗ ಬೇಳೆ ಬೇಯಲು ಅರ್ಧ ಗಂಟೆ ಹಿಡಿಯುತ್ತಿತ್ತು ಈಗ ಕೇವಲ ಕಾಲು ಗಂಟೆ ಸಾಕು ಎಂಬುದು ಇವರ ಅನುಭವ.
ಇವರ
ಮಳೆ ನೀರು ಸಂಗ್ರಹ ರಚನೆ ಅತ್ಯಂತ ಸುಲಭ. ಛಾವಣಿ ನೀರನ್ನು ಸಂಗ್ರಹಿಸಲು ಪೈಪುಗಳ ಜೋಡಣೆ, ನೀರು ತೊಟ್ಟಿಗೆ ಬೀಳುವ ಮುನ್ನ ಶೋಧಕ ಹಾದು ಬರುವಂತೆ ವ್ಯವಸ್ಥೆ. ಮೊದಲ ಮಳೆ ನೀರು ಹೊರ ಹೋಗಲು ಒಂದು ಪೈಪು. ಮನೆ ಅಂಗಳದ ಭೂಮಿ ಒಳಭಾಗದಲ್ಲಿ ತೊಟ್ಟಿ ನಿರ್ಮಾಣ. ಈ ತೊಟ್ಟಿ ತುಂಬಿ ಹೆಚ್ಚಾದ ನೀರು ಸಂಪಿಗೆ ಹೋಗುವಂತೆ ಮಾಡಲಾಗಿದೆ. ತೊಟ್ಟಿ ಮೇಲ್ಭಾಗದಲ್ಲಿ ಕೈಪಂಪು. ನೀರಿನ ರುಚಿ ಕಂಡು ಬರುವವರ ಸಂಖ್ಯೆ ಹೆಚ್ಚಾಗಿದ್ದರಿಂದ ಈಗ ಕೈಪಂಪಿಗೆ ಬೀಗ ಹಾಕಿದ್ದಾರೆ. "ಅಷ್ಟರಮಟ್ಟಿಗೆ ನೀರಿನ ಅಮೂಲ್ಯತೆ ಬಗ್ಗೆ ಎಚ್ಚರ ಮೂಡಿರುವುದು ಹೆಮ್ಮೆಯ ವಿಷಯ" ಎನ್ನುತ್ತಾರೆ ಬೈಫ್ ನ ಅಧಿಕಾರಿ ಎಂ.ಬಿ.ಹಳ್ಳಿ. ಇದೇ ಗ್ರಾಮದ ಶಶಿಕಲರವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮನೆಯ ಒಳಗೇ ತೊಟ್ಟಿ ಮಾಡಿಕೊಂಡಿದ್ದಾರೆ. ಮಳೆ ನೀರು ವೃಥಾ ಪೋಲಾಗುವುದನ್ನು ತಪ್ಪಿಸಲು ಈ ಕ್ರಮ ಎನ್ನುತ್ತಾರೆ ಅವರು. ಛಾವಣಿ ನೀರು ಸಂಗ್ರಹದ ನಿರ್ವಹಣೆ ಕಷ್ಟ ಎಂದು ಕೆಲವರು ಕುಂಟುನೆಪ ಹೇಳುತ್ತಾರೆ, ಆದರೆ ಇವರಿಗೆ ಒಂದು ವರ್ಷದಲ್ಲಿ ಎಂದೂ ಹಾಗನಿಸಿಲ್ಲ. ಇಡೀ ರಚನೆಗೆ ಅಂದಾಜು ೧೮ ಸಾವಿರ ವೆಚ್ಚವಾಗಿದ್ದು ೫ ಸಾವಿರ ರೂಗಳನ್ನು ನಾಗರಾಜು-ಲಲಿತಮ್ಮ ಭರಿಸಿದ್ದಾರೆ. ಫಲಾನುಭವಿಗಳು ನಿರ್ದಿಷ್ಟ ವಂತಿಗೆ ನೀಡುವುದು ಇಲ್ಲಿ ಕಡ್ಡಾಯ.
ಈಗ ಇವರನ್ನು ನೋಡಿ ಹಲವಾರು ಕುಟುಂಬದವರು ತಮ್ಮದೇ ಛಾವಣಿ ನೀರು ಕುಡಿಯಲು ಮುಂದಾಗಿದ್ದಾರೆ. ಹಳ್ಳಿಯ ಸಮಸ್ತರಿಗೂ ಮತ್ತು ಜಿಲ್ಲೆಯ ಎಲ್ಲರಿಗೂ ಆ ಹುಮ್ಮಸ್ಸು ಬರಬೇಕು.
ಮಲ್ಲಿಕಾರ್ಜುನ ಹೊಸಪಾಳ್ಯ
- 600 reads
Email this page
Printer-friendly version
ಲೇಖಕರು
ಹೆಸರು
ಮಲ್ಲಿಕಾರ್ಜುನ ಹೊಸಪಾಳ್ಯ
ಪರಿಚಯ
ಹುಟ್ಟೂರು ತುಮಕೂರು ಜಿಲ್ಲೆ ಹೊಸಪಾಳ್ಯ. ಒಕ್ಕಲುತನದ ಕುಟುಂಬ. ನಾಟಿಬೀಜ ಸಂರಕ್ಷಣೆ ಮತ್ತು ದೇಸೀ ರೈತಜ್ಞಾನ ದಾಖಲಾತಿಯಲ್ಲಿ ವಿಶೇಷ ಆಸಕ್ತಿ. ಆ ಹಾದಿಯಲ್ಲಿ ವ್ಯಾಪಕ ಓಡಾಟ, ರೈತರ ಒಡನಾಟ, ಅಧ್ಯಯನ. ನಾಲ್ಕು ವರ್ಷ ‘ಗ್ರಾಮಮಿತ್ರ’ ಕೃಷಿ ಕ್ಯಾಲೆಂಡರ್ ಮತ್ತು ನಾಟಿತಳಿ ಕುರಿತ ‘ಪೈರು ಪಚ್ಚೆ’ ತ್ರೈಮಾಸಿಕದ ಸಂಪಾದಕತ್ವ. ಹವ್ಯಾಸಿ ಬರಹಗಾರ ಮತ್ತು ಛಾಯಾಗ್ರಾಹಕ. ತುಮಕೂರಿನಲ್ಲಿ ‘ಧಾನ್ಯ’ ಸಂಸ್ಥೆ ಸ್ಥಾಪನೆ. ನಿರಂತರ ಜಲ ಜಾಗೃತಿ ಕಾರ್ಯಕ್ರಮಗಳ ಸಂಘಟನೆ. ನೀರಿನ ಸುದ್ದಿಗಳಿಗೇ ಮೀಸಲಾದ ‘ಜಲಸಿರಿ’ ಮಾಹಿತಿ ಪತ್ರದ ಪ್ರಕಟಣೆ. ಕೃಷಿ ಮಾಧ್ಯಮ ಕೇಂದ್ರ, ಧಾರವಾಡ - ಸಂಸ್ಥೆಯಿಂದ ೨೦೦೪ ನೇ ಸಾಲಿನ ರಾಜ್ಯ ಮಟ್ಟದ ಅತ್ಯುತ್ತಮ ಕೃಷಿ ಬರಹಗಾರ ಪ್ರಶಸ್ತಿ. ಕಳೆದೆರಡು ವರ್ಷಗಳಿಂದ ತುಮಕೂರು ಜಿಲ್ಲೆಯ ಪಾರಂಪರಿಕ ಜಲಮೂಲಗಳಾದ ತಲಪರಿಗೆಗಳ ಕುರಿತು ಅಧ್ಯಯನ. ಭೂಷಣ್ ಮಿಡಿಗೇಶಿಯವರ ಜೊತೆಗೂಡಿ ’ತಲಪರಿಗೆ ಜೀವಪೊರೆಯುವ ಜಲನಿಧಿ” ಪುಸ್ತಕ ಸಂಪಾದನೆ. ಪ್ರಕಟಿತ ಇತರ ಪುಸ್ತಕಗಳೆಂದರೆ, •ನಶಿಸುತ್ತಿರುವ ನೀರಿನ ಜ್ಞಾನ - ಕರ್ನಾಟಕದ ಪಾರಂಪರಿಕ ಜಲ ಸಂರಕ್ಷಣಾ ಪದ್ಧತಿಗಳು (ಸಂಪಾದಕ) •ಕೃಷಿ ಆಚರಣೆ •ಬೀಜದ ಬುಟ್ಟಿ - ನಾಟಿ ತಳಿಗಳ ಲೋಕದಲ್ಲೊಂದು ಸುತ್ತು (ಇತರ ಲೇಖಕರೊಡಗೂಡಿ) •ಬೀಜದ ಹಕ್ಕು (ಸಂಗ್ರಹಾನುವಾದ) •ನೆಟ್ಟಿರಾಗಿ - ರಾಗಿ ಕೃಷಿಕರ ಹೊಸ ಬೆಳಕು •ಭತ್ತ-ಬರಿದಾಗುತ್ತಿರುವ ಅನ್ನದ ಬಟ್ಟಲು
ವಿಶೇಷ ಬರಹಗಳು
ಇತ್ತೀಚಿನ ಬ್ಲಾಗ್ ಬರಹಗಳು
- ಫೊಟೊ ಅಲ್ಬಮ್
- ಗಣಿಗಾರಿಕೆಯಲ್ಲಿ- ತಡೆಆಣೆಕಟ್ಟು (ಚೆಕ್-ಡ್ಯಾ೦)
- ಪ್ರಥಮ್ ಬುಕ್ಸ್ ""ಕಾವೇರಿ" ಪುಸ್ತಕದ ಬಿಡುಗಡೆ ಮತ್ತು "ನಿಮ್ಮ ನದಿಯನ್ನು ಕಾಪಾಡಿ ನೀರನ್ನು ಉಳಿಸಿ" ಆಂದೋಲನ
- ಇಲ್ಲಿ ‘ಕೊಳಚೆ ನೀರು ಕುಡಿಯುವ ನೀರು’!`ಪಲ್ಸಡ್ ಪ್ಲೇಟ್' ತಂತ್ರಜ್ಞಾನ ಎಸ್.ಡಿ.ಎಂ. ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಗಳ ಆವಿಷ್ಕಾರ.
- ಮಳೆ ಬಂದರೆ ಬೆಂಗಳೂರಿಗೆ ಭೇದಿ
- ಮಳೆ ಎಂದರೆ ಬಾಲ್ಯದ ನೆನಪು ಕಣಾ...
- ನಾವು ವೃತ್ತಿ/ಕೆಲಸ ಮಾಡುವಲ್ಲಿ ನೀರಿನ ಮಿತಬಳಕೆಯ ಬಗ್ಗೆ ಜಾಗೃತಿ ಹೇಗೆ ಮೂಡಿಸಬಹುದು ?
- ರೇಡಿಯೋದಲ್ಲಿ K2K
- ಮಡಿವಾಳ ಕೆರೆಯ ಉಳಿಸಿ - ಒಂದು ಕೂಗು
- ಕೆರೆ ಕರಗುವ ಸಮಯ: ನಿಮಗಿದೋ ಆಮಂತ್ರಣ
ಇತ್ತೀಚಿನ ಪ್ರತಿಕ್ರಿಯೆ
- Re: This is very nice in
1 week 5 days ago - Re: ಇಲ್ಲಿ ‘ಕೊಳಚೆ ನೀರು ...
2 weeks 5 days ago - Re: ‘ಇರುವೆ’; ಅಂತರ್ಜಲ ...
11 weeks 3 days ago - Re: ನಮ್ಮ ಮನೆಯ ತಾರಸಿ ಮೇಲೆ ...
11 weeks 6 days ago - Re: ‘ಕುಡಿಯಲು ಬಿಲ್ಕುಲ್ ...
14 weeks 3 days ago - Re: ಧಾರವಾಡದ ನೆಲ ನುಂಗಿ; ...
15 weeks 5 days ago - Re: ದೇಸಿ ತಂತ್ರಜ್ಞಾನದಿಂದ ...
17 weeks 12 hours ago - Re: ದೇಸಿ ತಂತ್ರಜ್ಞಾನದಿಂದ ...
17 weeks 4 days ago - Re: ಧಾರವಾಡದ ಮೂಕಾಂಬಿಕಾ ...
22 weeks 9 hours ago - Re: ಮಳೆ ಎಂದರೆ ಬಾಲ್ಯದ ...
22 weeks 6 days ago
| Subscribe to IWP Kannada list |
| Visit this group |










Post new comment