ಕಿಲಾರಿಗರು ಭಲೇ ಕಿಲಾಡಿ ಜಲ ಯೋಧರು!

ಕಿಲಾರದ ಬಾಯಾರಿಕೆಯನ್ನು ತಣಿಸಿದ ವಾಸುದೇವ ನಾಯ್ಕ್ ಹಾಗು ಬಾಲಕೃಷ್ಣ ನಾಯ್ಕ್ ಬೆಟ್ಟದ ತಪ್ಪಲಿನ ವೈಜ್ಞಾನಿಕ ಮಳೆ ನೀರು ಇಂಗು ಗುಂಡಿಗಳ ಎದುರು.

"ಒಳ್ಳೆಯ ದಾರಿ ಹಾಗೆಯೇ ಮಾರಾಯ್ರೇ..ಬೆಳಕಿನಲ್ಲಿಯೂ ಕಾಣೋಲ್ಲ. ಆ ದಾರಿಯಲ್ಲಿ ಹೋಗೋಕೆ ಏನೆಲ್ಲ ಮೀನ-ಮೇಷ ಎಣಿಸ್ತೇವೆ. ದಾರಿ ತಪ್ಪಿದರೂ ವಾಪಸ್ ಬರೋದು ಇಲ್ಲಿ ಸುಲಭ. ಆದ್ರೆ..ಕೆಟ್ಟ ದಾರಿ ನೋಡಿ..ಕತ್ತಲಿನಲ್ಲಿ ಬ್ಯಾಟರಿ ಬೆಳಕು ಇರದಿದ್ದರೂ ನಿಚ್ಚಳವಾಗಿ ಕಾಣ್ಸುತ್ತೆ. ಯಾವ ಅಳುಕು-ಅಂಜಿಕೆ ಇಲ್ಲದೇ ಭರಭರ ಆ ಕೆಟ್ಟ ದಾರಿಯಲ್ಲಿ ನಡೆದೇ ಬಿಡುತ್ತೇವೆ. ಇಲ್ಲಿಂದ ವಾಪಸ್ ಬರಲು ಒಂದು ಪೀಳಿಗೆಯನ್ನು ಬಲಿ ಕೊಡಬೇಕಾದೀತು!" ಕಿಲಾರದ 'ಅಕ್ಷಯ ಜೀವನ' ಸಂಚಾಲಕ ವಾಸುದೇವ ನಾಯ್ಕ್ ಮನ ಮುಟ್ಟುವಂತೆ ಹೇಳಿದ ಮಾತು.

ಯಾವುದದು ನೀರಿನ 'ಅಕ್ಷಯ ಪಾತ್ರೆ' ಹಾಗು 'ವಿಷ ರಹಿತ ಅನ್ನದ ಬಟ್ಟಲು' ಕಿಲಾರ?

'ಕಿಲಾರ' ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಒಂದು ವಿಶೇಷ ಹಳ್ಳಿ. ದಟ್ಟ ಹಸಿರು ಕಾಡು. ಬೇತಲೆ ಮಣೆಯಂತೆ ಗುಡ್ಡಗಳನ್ನು ಸೀಳಿಕೊಂಡು ಹೋದ, ಆಧುನಿಕತೆಯನ್ನು ಸಾರುವ ಟಾರ್ ರಸ್ತೆಗಳು. ಅಲ್ಲಲ್ಲಿ ಸೊಂಪಾಗಿ ನಿಂತ ಅಡಿಕೆ ತೋಟಗಳು. ಅಡಿಕೆ ಮರ ಬಳಸಿ ಬೆಳೆದು ತೋಟಕ್ಕೆ ಚಪ್ಪರಹಾಕಿದಂತೆ ಹಬ್ಬಿರುವ ವೆನಿಲ್ಲಾ ಬಳ್ಳಿ. ಏಲಕ್ಕಿ, ಮೆಣಸಿನ ಕಂಪು. ನಯನಮನೋಹರ ಝರಿಗಳು. ಕಾಲುದಾರಿಗಳಲ್ಲಿ ಜಲಪಾತಗಳು. ನೂರಾರು ಎಕರೆ ಭತ್ತದ ಗದ್ದೆಗಳು. ಹೀಗೆ ಎರಡು ಗುಡ್ಡಗಳ ಮಧ್ಯದ ಕಣಿವೆಯಲ್ಲಿ ತಲೆ ಎತ್ತಿನಿಂತ ಹಳ್ಳಿ ಕಿಲಾರ. ಕರ್ನಾಟಕ ಸರಕಾರದ ಸಾವಯವ ಕೃಷಿ ಮಿಷನ್ ಯೋಜನೆ ಅಡಿ ಸಂಪೂರ್ಣ ಸಾವಯವ ಕೃಷಿಗೆ ಒಗ್ಗಿರುವ ಗ್ರಾಮ. ವಿಶೇಷವೆಂದರೆ ಬಟ್ಟಲಿನಾಕಾರದ ಭೂ ಪ್ರಕೃತಿ ಮಡಿಲಲ್ಲಿ 'ಅಕ್ಷಯ ಜೀವನ' ಅವರದ್ದು.

 

ನಿಮಗೆಲ್ಲ ತಿಳಿದಿದೆ. ಮಲೆನಾಡಿನಲ್ಲಿ ಏಳರಿಂದ ಎಂಟು ಮನೆಗಳಿಗೆ ಒಂದು ಊರು. ಹಾಗೆಯೇ ಅಂಬಳಿಕೆ, ಹೊರಕೊಪ್ಪ, ಕಾಲುಮುರಿ, ಪರ್ಪಟ್ಟೆ, ಹಿತ್ಲಗದ್ದೆ ಹಾಗು ಓಣಿ ಮನೆ ಈ ಎಲ್ಲ ಗ್ರಾಮಗಳು ಸೇರಿದ ವಿಶಿಷ್ಟ 'ಹಸೂಡಿ' (ಕೆಂಪು) ಅಕ್ಕಿಯ ಅನ್ನದ ಬಟ್ಟಲೇ 'ಕಿಲಾರ'. ಸದ್ಯ ಒಟ್ಟು ೭೩ ಕುಟುಂಬಗಳು ಇಲ್ಲಿದ್ದು ಎಲ್ಲರೂ ಭತ್ತ ಹಾಗು ಕಂಗು ಕೃಷಿ ಆಶ್ರಿತರೇ. ರಾಜ್ಯ ಸರಕಾರದ ಸಾವಯವ ಗ್ರಾಮ ಯೋಜನೆಗೆ ಸಾಗರದ ಕೃಷಿ ಪ್ರಯೋಗ ಪರಿವಾರದ್ದೇ ಸಾರಥ್ಯ. ಈ ಪ್ರಯತ್ನಕ್ಕೆ ಕೃಷಿ ರುಷಿ ಅ.ಶ್ರೀ.ಆನಂದ ಹಾಗು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಕ್ಷೆ. 'ಅಕ್ಷಯ ಜೀವನ' ಸಂಘಟನೆಯ ಅಧ್ಯಕ್ಷ ಸತೀಶ್ ಹೆಗಡೆ ಹಾಗು ಸದಸ್ಯ (ಪಂಚಾಯತಿಯ ಮೇಂಬರ್ ಸಹ) ಬಾಲಕೃಷ್ಣ ನಾಯ್ಕ್, ಆನಂದ, ಅರುಣ್ ಅವರ ಪರಿಶ್ರಮ ಈ ನಿಟ್ಟಿನಲ್ಲಿ ಅಷ್ಟಿಷ್ಟಲ್ಲ. ಕಳೆದ ಭಾನುವಾರ ನನಗೆ ಅದೊಂದು ಚೇತೋಹಾರಿ ಅನುಭವವಾಗಿತ್ತು.

ಕಿಲಾರಿಗರು ಭಲೇ ಕಿಲಾಡಿ ಜಲಯೋಧರು!

ಮಳೆಗಾಲದ ಜೂನ್, ಜುಲೈ ಹಾಗು ಆಗಸ್ಟ್ ತಿಂಗಳುಗಳಲ್ಲಿ ಕಿಲಾರ ಅಕ್ಷರಶ: ಜಲಾವೃತ. ನಡುಗಡ್ಡೆಯಂತಾಗುವ ಅನ್ನದ ಬಟ್ಟಲು. ಮನೆಯಿಂದ ಯಾರೂ ಹೊರಗೆ ಹೆಜ್ಜೆ ಕಿತ್ತಿಡುವಂತಿಲ್ಲ. ಅಷ್ಟು ರಭಸದಲ್ಲಿ ಮಳೆ ಹುಯ್ಯುತ್ತದೆ. ಅಷ್ಟೇ ಜೋರಾಗಿ ಗಾಳಿ ಬೀಸುತ್ತದೆ. ಪ್ರತಿ ವರ್ಷ ನೂರಾರು ಅಡಿಕೆ ಮರಗಳು ಧರಾಶಾಯಿಯಾಗುವುದು ಇವರಿಗೆ ಹೊಸದೇನಲ್ಲ. ಆದರೆ ಫೆಬ್ರುವರಿ, ಮಾರ್ಚ್ ತಿಂಗಳಿಗೇ ಊರಿನ ಎಲ್ಲ ಜಲಮೂಲಗಳು ಬತ್ತಿ ನೀರಿಗೆ ಹಾಹಾಕಾರ. ಇದು ಹೊಸ ಸಮಸ್ಯೆ! ನೀವೇ ಊಹಿಸಿ ಎಪ್ರಿಲ್ ಹಾಗು ಮೇ ತಿಂಗಳಿನ ಬಿರು ಬಿಸಿಲಿನಲ್ಲಿ ಇಲ್ಲಿನ ಜನರ ಪರಿಸ್ಥಿತಿ ಹೇಗಿದ್ದೀತು?

'ಅಕ್ಷಯ ಜೀವನ' ಸಂಘಟನೆಯ ಸದಸ್ಯರೆಲ್ಲ ಒಟ್ಟಾಗಿ ಕುಳಿತು ಯೋಚಿಸಿದರು. ಮಳೆಗಾಲದಲ್ಲಿ ಭರ್ತಿ ನೀರಿದ್ದರೂ, ಕುಡಿಯಲು ಬಳಸುವ ೨ ಕೊಳವೆ ಬಾವಿಗಳು ಹಾಗು ೩ ತೆರೆದ ಬಾವಿಗಳು ಬೇಸಿಗೆಯಲ್ಲಿ ಪೂರ್ಣ ಬತ್ತುವುದನ್ನು ತಡೆಯುವುದು ಹೇಗೆ? ಗಣಪತಿ ನಾಯ್ಕ್ ಹಾಗು ಬಾಲಕೃಷ್ಣ ನಾಯ್ಕ್ ಭೂಮಿಗೆ ನೀರಿಂಗಿಸುವ ಪ್ರಯತ್ನಕ್ಕೆ ಬೆನ್ನೆಲುಬಾಗಲು ಮುಂದೆ ಬಂದರು. ಯೋಜನೆಯ ಸಂಪೂರ್ಣ ಜವಾಬ್ದಾರಿ ನಿರ್ವಹಿಸಲು ಮಾನಸಿಕವಾಗಿ ಸಿದ್ಧರಾದರು. ಸಮುದಾಯದ ಸಹಭಾಗಿತ್ವದಲ್ಲಿಯೇ ಇಂಗು ಗುಂಡಿಗಳ ನಿರ್ಮಾಣ ಹಾಗು ಅರಣ್ಯೀಕರಣಕ್ಕೆ ಚಾಲನೆ ನೀಡಲು ನಿರ್ಧರಿಸಿದರು.

"ಎಷ್ಟೇ ಮಳೆ ಬಿದ್ದರೂ ನೀರೆಲ್ಲ ಹಳ್ಳ ಸೇರಿ ಹರಿದು ಬಿಡುತ್ತಿತ್ತು. ಮಳೆಗಾಲ ಪೂರ್ತಿ ಊರೆಲ್ಲ ಜವುಳು. ಬೇಸಿಗೆ ಪೂರ್ತಿ ಬರ. ಗುಡ್ಡಗಳ ಗಿಡಗಳೆಲ್ಲ ಕತ್ತರಿಸಿ ಹೋಗಿ ನೀರಿಂಗುವುದೂ ನಿಂತಿತ್ತು" ಕಳವಳದಿಂದ ಹೇಳಿದರು ಬಾಲಕೃಷ್ಣ ನಾಯ್ಕ್. ಅವರ ಕಾಳಜಿಯಿಂದ ಜಲ ನಿರ್ಮಲ ಯೋಜನೆಯ ಅಡಿಯಲ್ಲಿ ಕಿಲಾರ ಗ್ರಾಮ ಪಂಚಾಯಿತಿ ೫.೫ ಲಕ್ಷ ರುಪಾಯಿಗಳ ಅನುದಾನ ಪಡೆಯಿತು. ೮೫% ಪಾಲು ಸರಕಾರದ್ದು. ೧೦% ಪಾಲು ಗ್ರಾಮಸ್ಥರು (ಫಲಾನುಭವಿಗಳದ್ದು) ಹಾಗು ಉಳಿದ ೫% ಯೋಜನೆಯ ಹಣ ಗ್ರಾಮ ಪಂಚಾಯ್ತಿ ತುಂಬಬೇಕಿತ್ತು. ಇದಕ್ಕೆಲ್ಲ ಹೊಂದಾಣಿಕೆ ಮಾಡಿಕೊಳ್ಳಲಾಯಿತು.

ಬಾಯಾರಿದ ಭೂಮಿಯ ದಾಹ ತಣಿಸಲು ಊರವರು ಭಗೀರಥ ಪರಿಶ್ರಮಕ್ಕೆ ಸಿದ್ಧರಾದರು. ಗೋಮಾಳ, ಕಾಡು, ಗುಡ್ಡ, ಸೊಪ್ಪಿನ ಬೆಟ್ಟ, ಹಿತ್ತಿಲು ಹಾಗು ಬರಡು ಭೂಮಿಯಲ್ಲಿ ಮಳೆ ನೀರು ಇಂಗು ಗುಂಡಿಗಳನ್ನು ತೋಡಲು ನಿರ್ಣಯಿಸಲಾಯಿತು. ಯೋಜಿಸಿದಂತೆ ವೈಜ್ಞಾನಿಕ ರೀತ್ಯಾ, ವೃತ್ತಾಕಾರವಾಗಿ ೪ ಗುಡ್ಡಗಳಿಗೆ ಸುಳಿ ಹೊಡೆದಂತೆ ೮ ಸಾವಿರ ಇಂಗು ಗುಂಡಿಗಳನ್ನು ತೋಡಲಾಯಿತು. ಆಶ್ಚರ್ಯ ಎಂದರೆ ಮಳೆ ನೀರಿನಿಂದ ತುಂಬಿ ನಿಂತಿದ್ದ ಇಂಗು ಗುಂಡಿಗಳು ಮರು ದಿನವೇ ಪೂರ್ಣ ಖಾಲಿ! ನಾವು ಈಗ ಲೆಕ್ಕಿಸಬಹುದು. ಈ ಭಾಗದ ಅತಿ ಹೆಚ್ಚು ಮಳೆ ಬೀಳುವ ಮಲೆನಾಡಿನ ಹಳ್ಳಿಯಲ್ಲಿಯೂ ಭೂಮಿ ಅದೆಷ್ಟು ಬಾಯಾರಿತ್ತು ಎಂಬುದನ್ನು!

ಒಂದು ಎಕರೆ ಪ್ರದೇಶದಲ್ಲಿ ಒಂದಿ ಇಂಚು ಮಳೆ ಬಿದ್ದರೂ ನಾವು ಸಂಗ್ರಹಿಸಬಹುದಾದ ನೀರು ೧,೦೦,೪೪೦ ಲೀಟರ್! ಒಂದು ಎಕರೆಯಲ್ಲಿ ವರ್ಷಕ್ಕೆ ಬೀಳುವ ಸಾಧಾರಣ ಮಳೆಯಿಂದ ೧೫-೧೬ ಲಕ್ಷ ಲೀಟರ್ ನೀರು ಸಂಗ್ರಹಿಸಬಹುದು. ಹಾಗೆಯೇ ಒಂದು ಹೆಕ್ಟೇರ್ ಪ್ರದೇಶದಲ್ಲಿ ಒಂದು ವರ್ಷದ ಅವಧಿಯಲ್ಲಿ ಬೀಳುವ ಮಳೆಯಿಂದ ೧,೦೦೦ ಜನರ ೧ ವರ್ಷದ ನೀರಿನ ಅಗತ್ಯವನ್ನು ಪೂರೈಸಬಹುದು. ಒಂದು ಕಿಲೋ ಭತ್ತ ಬೆಳೆಯಲು ೧೨,೫೦೦ ಲೀಟರ್ ನೀರು ಬೇಕು. ಹಾಗೆಯೇ ಮಡಗಾಸ್ಕರ್ ವಿಧಾನದಲ್ಲಿ ಬೆಳೆದರೆ ೧,೨೫೦ ಲೀಟರ್ ನೀರು ಬೇಕು. ೧೦ ಅಡಿ ಉದ್ದ, ೧೦ ಅಡಿ ಅಗಲ ಹಾಗು ೧೦ ಅಡಿ ಆಳವಿರುವ ಮಳೆ ನೀರು ಇಂಗು ಗುಂಡಿ ವರ್ಷಕ್ಕೆ ೪೦,೦೦೦ ಲೀಟರ್ ನೀರನ್ನು ಅಂತರ್ಜಲಕ್ಕೆ ಸೇರಿಸಬಲ್ಲುದು!

"ಈ ಬಾರಿಯ ಬೇಸಿಗೆಯಲ್ಲಿ ಬತ್ತಲು ಸಿದ್ಧವಾಗಿದ್ದ ಕೊಳವೆ ಹಾಗು ತೆರೆದ ಬಾವಿಗಳಲ್ಲಿ ಕೇವಲ ೪ ಅಡಿಗೇ ನೀರು ನಿಲುಕುವಂತಾಗಿತ್ತು" ಎಂದು ನೆನಪಿಸಿಕೊಳ್ಳುತ್ತಾರೆ ಅಕ್ಷಯ ಜೀವನದ ಅಧ್ಯಕ್ಷ ಸತೀಶ್ ಹೆಗಡೆ.

ಸಿದ್ದಾಪುರದ ಜಿಲ್ಲಾ ಪಂಚಾಯಿತಿ ಇಂಜಿನೀಯರ್ ಉಮಾ ನಾಯ್ಕ್ ಹಾಗು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಎನ್.ಕಾನಳ್ಳಿ ೫-೬ ತಿಂಗಳಿನಲ್ಲಿ ನಾಲ್ಕಾರು ಬಾರಿ ಕಿಲಾರಕ್ಕೆ ಭೇಟಿ ನೀಡಿ, ೨೦ ಜನ ನಿತ್ಯ ಇಂಗು ಗುಂಡಿಗಳಿಗಾಗಿ ಶ್ರಮದಾನ ಮಾಡುವುದನ್ನು ಮೆಚ್ಚಿದ್ದಾರೆ. ಈಗ ಕಿಲಾರದ ಕೃಷಿಕ ಫಲಾನುಭವಿಗಳು ಅದ್ಜಿಕಾರಿಗಳ ಶ್ರಮವನ್ನು ಧನ್ಯತೆಯಿಂದ ಸ್ಮರಿಸುತ್ತಾರೆ. ಈ ಮಳೆ ನೀರು ಇಂಗುಗುಂಡಿಗಳ ಸಕಾಲಿಕ ನಿರ್ಮಾಣದಿಂದ ಮಣ್ಣಿನ ಸವಕಳಿ ಗಣನೀಯ ಪ್ರಮಾಣದಲ್ಲಿ ಇತೀಚೆಗೆ ನಿಂತಿದೆ. ಫಲವತ್ತಾದ ಮಣ್ಣಿನ ಸವಕಳಿ ತಡೆಯಲು ಲಾವಂಚದ ಗಿಡಗಳನ್ನು ಸಹ ಬೆಳೆಸಲಾಗಿದೆ. ಹಾಗಾಗಿ ಭತ್ತದ ಗದ್ದೆ, ಅಡಿಕೆ ತೋಟಗಳಿಗೆ ರಭಸದಿಂದ ಮಳೆ ನೀರು ನುಗ್ಗಿ ಮಾಡುತ್ತಿದ್ದ ನಷ್ಟ ಸಂಪೂರ್ಣ ಇಳಿಮುಖವಾಗಿದೆ. ಬೇಸಿಗೆಯಲ್ಲಿಯೂ ಗದ್ದೆಗಳು ತಂಪಾಗಿದ್ದು ೨ ಬೆಳೆ ಬೆಳೆದುಕೊಳ್ಳಲು ಅನುಕೂಲವಾಗಿದೆ.

ಕಿಲಾರದಿಂದ ೨ ಕಿ.ಮೀ. ದೂರದಲ್ಲಿರುವ ಮಜಿರೆ (ಹಳ್ಳಿಗಿಂತ ಚಿಕ್ಕದು) ಕವಲುಮುರಿಯಲ್ಲಿ ಈ ಇಂಗುಗುಂಡಿಗಳ ಪರಿಣಾಮವಾಗಿ ಬೇಸಿಗೆಯಲ್ಲಿಯೂ ಭತ್ತ ಬೆಳೆಯಲಾಗುತ್ತಿದೆ!

ಇಷ್ಟಕ್ಕೇ ಸುಮ್ಮನಿರದ ಬಾಲಕೃಷ್ಣ ನಾಯ್ಕ್ ರು,  ಸುಮಾರು ೫ ಕಿ.ಮೀ. ದೂರದ ತೊರಮೇಜಿಡ್ಡು ಹಾಗು ಕುಳವೀಡುಗ್ರಾಮದಿಂದ ಕಿಲಾರಕ್ಕೆ ನೀರು ಹರಿಸುವ ಪ್ರಯತ್ನಕ್ಕೆ ಮುಂದಾದರು. ೨ ಇಂಚಿನ ನೈಸರ್ಗಿಕ ಝರಿ ಅಲ್ಲಿತ್ತು. ಯಾವುದೇ ವಿದ್ಯುತ್, ಪಂಪ್ ಸೆಟ್  ಅವಶ್ಯಕತೆ ಇಲ್ಲದೇ ಕೇವಲ ಪೈಪ್ ಜೋಡಿಸಿ ನೀರಿನ ಹರಿವಿನ ನೈಸರ್ಗಿಕ ಒತ್ತಡವನ್ನೇ ಬಳಸಿಕೊಂಡು ಅತೀ ಕಡಿಮೆ ವೆಚ್ಚದಲ್ಲಿ ಸ್ವಚ್ಛ ಕುಡಿಯುವ ನೀರನ್ನು ಊರಿಗೆ ತರುವಲ್ಲಿ ಯಶಸ್ವಿಯಾದರು. ನೇರವಾಗಿ ಗುಡ್ಡದಿಂದ ಈ ಝರಿ ನೀರು ಬಂದು ಬೀಳಲು ಕಿಲಾರ ಗುಡ್ಡದ ತಪ್ಪಲಿನಲ್ಲಿ ಒಂದು ಟ್ಯಾಂಕ್; ಹಾಗೆಯೇ ಸೋಸಿ ಪ್ರಸರಣಕ್ಕೆ ಅಣಿಯಾಗಲು ಮತ್ತೊಂದು ಸಿಮೆಂಟ್ ತೊಟ್ಟಿ. ಈ ತೊಟ್ಟಿ ಗುಡ್ಡದ ಮೇಲಿದ್ದು, ರಭಸವಾಗಿ ಹರಿದುಕೊಂಡು ಎಲ್ಲ ೭೩ ಮನೆಗಳಿಗೆ ಗ್ರಾಮ ಪಂಚಾಯಿತಿ ವತಿಯಿಂದ ಅಳವಡಿಸಲಾದ ನಳದ ಮೂಲಕ ತಲುಪುತ್ತಿದೆ. ತಿಂಗಳಿಗೆ ೩೦ ರುಪಾಯಿ ನಿರ್ವಹಣಾ ವೆಚ್ಚ  ಮಾತ್ರ ಗ್ರಾಮಸ್ಥರು ಭರಿಸುತ್ತಿದ್ದಾರೆ.

ಸದ್ಯ ಬಾಲಕೃಷ್ಣ ನಾಯ್ಕ್, ವಾಸುದೇವ ನಾಯ್ಕ್ ಹಾಗು ಸತೀಶ್ ಹೆಗಡೆ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೂ ಈ ಕುರಿತಂತೆ 'ಅಕ್ಷಯ ಜೀವನ' ವತಿಯಿಂದ ಮನವಿ ಸಲ್ಲಿಸಿದ್ದಾರೆ. ಕಿಲಾರ ಊರಿನಿಂದ ೬ ಕಿ.ಮೀ. ದೂರದ ಮಜಿರೆ ಗುಮಟೆಕೊಡ್ಲುವಿನಲ್ಲಿ ೮ ಇಂಚು ನೀರು ಇರುವ ನೈಸರ್ಗಿಕ ಝರಿ ಗುರುತಿಸಲಾಗಿದೆ. ಕಿಲಾರ ಗ್ರಾಮ ಪಂಚಾಯಿತಿ ಯೋಜನಾ ವೆಚ್ಚವನ್ನು ೧೫ ಲಕ್ಷ ಎಂದು ಅಂದಾಜಿಸಿದೆ. ಈ ಯೋಜನೆಗೆ ಸಿದ್ದಾಪುರ ಜಿಲ್ಲಾ ಪಂಚಾಯಿತಿ ಹಸಿರು ನಿಶಾನೆ ತೋರಿದ್ದೇ ಆದರೆ ಕಿಲಾರದಲ್ಲಿ ಬೇಸಿಗೆಯಲ್ಲಿಯೂ ಗದ್ದೆ, ತೋಟಪಟ್ಟಿಗೆ ನೀರು ಹರಿಸಿ ಕೃಷಿ ಕಾಯಕ ಕೈಗೊಳ್ಳಬಹುದಾಗಿದೆ. ಇನ್ನು ೬ ತಿಂಗಳಲ್ಲಿ ಈ ಯೋಜನೆ ಕಾರ್ಯಗತಗೊಳಿಸುವ ಛಲ ಬಾಲಕೃಷ್ಣ ನಾಯ್ಕ್ ಅವರದು.

ಕಿಲಾರದಂತೆ ಪರಿಸರ ಸ್ನೇಹಿ ವಿಧಾನಗಳಿಂದ ಜೀವದ್ರವ್ಯ ನೀರಿನ ಉಳಿಕೆ- ಹಿತ ಮಿತ ಬಳಕೆ ಹಾಗು ವ್ಯವಸ್ಥಿತ ಪ್ರಬಂಧನೆ ಎಲ್ಲ ಕಡೆಯೂ ಸಾಧ್ಯವಾದರೆ ಅಂತರ್ಜಲ ಮಟ್ಟ ಏರಿಸುವುದು ಕಷ್ಟವೇನಲ್ಲ. 'ಭೂಮಿಯ ತಾಪಮಾನ ಹೆಚ್ಚಾಗಿ, ಹಸಿರು ಮನೆ, ಅನಿಲಗಳ ಪರಿಣಾಮ ಫಲವಾಗಿ ಜ್ವರ ಏರುತ್ತಿದೆ' ಎಂದು ಸದಾ ಬರೆದು ಎಚ್ಚರಿಸುವ ಬಕ್ಕೇಮನೆ ನಾಗೇಶ ಹೆಗಡೆ ಅವರು 'ಸಾಕು ನಿಲ್ಲಿಸಿ..ಭೂಮಿಗೆ ಶೀತವಾಗಿ, ನೆಗಡಿ ನೆತ್ತಿಗೇರಿದೆ' ಎಂದು ಬರೆಯುವಂತಾಗಬಹುದು!

ವಾಸುದೇವ ಹೆಗಡೆ, ಬಾಲಕೃಷ್ಣ ನಾಯ್ಕ್, ಸತೀಶ್ ಹೆಗಡೆ ಹಾಗು ಗಣಪತಿ ನಾಯ್ಕ್ ರಂತಹ ಸಿದ್ಧತೆ-ಬದ್ಧತೆ ಬೇಕು ಅಷ್ಟೆ. ನಮ್ಮ ಸಾಮಾಜಿಕ ಅರಣ್ಯೀಕರಣಕ್ಕೂ ಪ್ರತ್ಯೇಕ ನೀರು ಬೇಕೆನ್ನುವ ಸ್ಥಿತಿ ಆಗ ಅಲ್ಲಿ ನಿರ್ಮಾಣವಾಗಲಾರದು. ಇಂಗು ಗುಂಡಿಗಳ ಬದುವಿನ ಮೇಲೆ ಹಾಗು ಕಾಡು ಕಡಿದಲ್ಲೆಲ್ಲ ಅಥವಾ ಮರಗಳು ವಿರಳವಾದಲ್ಲೆಲ್ಲ ಗಿಡ ನೆಡುವ ಯೋಜನೆ ಇಲ್ಲಿಯಂತೆ ಸಿದ್ಧಗೊಳ್ಳಬೇಕು. ಕಿಲಾರದಲ್ಲಿ ಈಗಾಗಲೇ ಹತ್ತು ಸಾವಿರ ಸಸಿಗಳನ್ನು ನೆಡಲಾಗಿದೆ. ಮಳೆ ಹಾಗು ೮ ಸಾವಿರ ವೈಜ್ಞಾನಿಕ ಇಂಗುಗುಂಡಿಗಳ ಫಲವಾಗಿ ಸುಮಾರು ೯,೫೦೦ ಗಿಡಗಳು ಬದುಕಿವೆ.

ಕಿಲಾರ ಈಗ ವಿಷರಹಿತ ಅನ್ನ ಹಾಗು ನೀರಿನ ಮಟ್ಟಿಗೆ ಸಂಪೂರ್ಣ ಸ್ವಾವಲಂಬಿ. ನನ್ನೊಟ್ಟಿಗೆ ೩೦ ಜನ ನಾಳಿನ ನಮ್ಮ ಭಾವಿ ಪತ್ರಕರ್ತರು ಈ ಗ್ರಾಮಕ್ಕೆ ಭೇಟಿ ನೀಡಿದ್ದರು. ಎಲ್ಲರೂ ಕಿಲಾರದವರಿಂದ ಪ್ರೇರಣೆ ಪಡೆದು ಬಂದಿದ್ದೇವೆ. ಇಂತಹ ಪ್ರಯತ್ನಕ್ಕೆ ನಮ್ಮಲ್ಲಿಯೂ ಚಾಲನೆ ನೀಡೋಣ.

***************************************************

ನೀವು ಕಿಲಾರಕ್ಕೆ ಭೇಟಿ ನೀಡಬೇಕೆ?

ಸಂಪರ್ಕಿಸಿ: ಸತೀಶ್ ಹೆಗಡೆ, ಅಧ್ಯಕ್ಷರು, (೦೮೩೮೯) ೨೮೧ ೦೯೫ (ರಾತ್ರಿ ೮.೩೦ ರಿಂದ ೧೦.೦೦ ಗಂಟೆ) ಅಥವಾ ವಾಸುದೇವ ನಾಯ್ಕ್,  ಕಾರ್ಯದರ್ಶಿಗಳು, 'ಅಕ್ಷಯ ಜೀವನ' ಕಿಲಾರ, ಮಾವಿನಗುಂಡಿ ಅಂಚೆ, ಸಿದ್ದಾಪುರ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ. ದೂರವಾಣಿ: ೯೪೮೦೬ ೦೨೭೮೨.

***************************************************

ಚಿತ್ರ-ಲೇಖನ:

ಹರ್ಷವರ್ಧನ ಶೀಲವಂತ
ಸಹಾಯಕ ಪ್ರಾಧ್ಯಾಪಕ
ಐ.ಎಂ.ಸಿ.ಆರ್ ಪತ್ರಿಕೋದ್ಯಮ ಮಹಾವಿದ್ಯಾಲಯ, ಹುಬ್ಬಳ್ಳಿ- ೨೯.

tumba khushui aaytu e lekhana odi.

ಅಮಿತ್ ಖುಷಿ ಆಯಿತು ತಮ್ಮ ಪ್ರತಿಕ್ರಿಯೆ ಓದಿ. ಇಂತಹ ಪ್ರಯತ್ನಗಳಿಗೆ ಎಲ್ಲ ಕಡೆಗಳಲ್ಲಿ ಚಾಲನೆ ನೀಡುವಂತಾದರೆ ಬಹುಶ: ಸರಕಾರಕ್ಕೆ ಬೇರೆ ಕೆಲಸ ಮಾಡಲು ಅವಕಾಶಗಳು ಸೃಷ್ಠಿಯಾಗಬಹುದು.

ಹರ್ಷವರ್ಧನ ವಿ. ಶೀಲವಂತ

Hi,

This is very good work. I am really impressed by the rain water harwesting.

I need more info on "How to do this". I am interested in getting this done in our village also.

Regards
Shashank
Mathur (Near Shimoga)

ಪ್ರೀತಿಯ ಶಶಾಂಕ್ ನಿಮ್ಮ ಪ್ರತಿಕ್ರಿಯೆ ನನ್ನ ಮನೋಬಲ ಹೆಚ್ಚಿಸಿದೆ. ‘ಎಲ್ಲ ಬಲ್ಲೆ’ ಎನ್ನುವರೇ ಈಗ ಹೆಚ್ಚಿರುವಾಗ ‘ಈ ಕುರಿತು ಹೇಗೆ ಮಾಡುವುದು..ಮಾಹಿತಿ ನೀಡುವಿರಾ ಎಂದು ಕೇಳುವರು ಅತಿ ವಿರಳ’.

ಅದಿರಲಿ. ನಿಮ್ಮ ಆಶಯಕ್ಕೆ ಸ್ಪಂದಿಸಬಹುದಾದವರು ನಮ್ಮ ಕಿಲಾರದ ಸತೀಶ್ ಹೆಗಡೆ, ಬಾಲಕೃಷ್ಣ ನಾಯ್ಕ್ ಹಾಗು ವಾಸುದೇವ ನಾಯ್ಕ್ ಅವರು. ಅವರ ಸಂಪರ್ಕ ವಿಳಾಸ, ಹಾಗು ದೂರವಾಣಿ ಸಂಖ್ಯೆ ಲೇಖನದ ಕೆಳಗೆ ನಮೂದಿಸಿದ್ದೇನೆ. ಆದರೆ ಸ್ಥಳೀಯ ಮಾದರಿಗಳು ಮಾತ್ರ ಇಲ್ಲಿ ಅನ್ವಯಕ್ಕೆ ಯೋಗ್ಯ. ಅವರ ಸಲಹೆ ಪಡೆದು ಮುಂದೆವರೆಯಲು ಅಡ್ಡಿ ಇಲ್ಲ.

ಧನ್ಯವಾದ.

ಹರ್ಷವರ್ಧನ ವಿ. ಶೀಲವಂತ

ಕಿಲಾರದ ಕಿಲಾಡಿಗಳ ಸಾಹಸ ಓದಿ ಬಹಳ ಸಂತೋಷವಾಯಿತು. ಇದೇ ರೀತಿಯ ಕಿಲಾಡಿಗಳು ಕರ್ನಾಟಕದ ಇತರ ಊರುಗಳಲ್ಲೂ ಇದ್ದಿದ್ದರೆ ಬಹಳ ಉಪಯೋಗವಾಗುತ್ತಿತ್ತು. ನಮ್ಮ ಕಡೆಯ ನೀರು ವ್ಯರ್ಥ ಮಾಡುವ ರೈತರನ್ನು, ಜನರನ್ನು ಕಂಡಾಗ ಬಹಳ ಬೇಸರವಾಗುತ್ತದೆ.

ರವಿಶಂಕರ್

ಆತ್ಮೀಯ ರವಿ ಶಂಕರ್,

ಹೀಗೆ ಮಾಡೋಣವೇ? ನಮ್ಮ ಹರಿ, ವಸಂತ, ಮುರಳಿ ಹಾಗು ನಾನು ಎಲ್ಲರೂ ಒಮ್ಮೆ ನಿಮ್ಮ ಊರಿಗೆ ಬರುತ್ತೇವೆ. ಜನರಿಗೆ ತಿಳಿವಳಿಕೆ ಕೊಡುತ್ತೇವೆ ಅಂತ ಅಲ್ಲ. ಆದರೆ ಬೇರೆ ಕಡೆಗಳಲ್ಲಿ ಆದ ಒಳ್ಳೆಯ ಜಲ ಹಾಗು ನೆಲ ಪ್ರಬಂಧನೆಯ ಬಗ್ಗೆ ಅವರಿಗೆ ಹೇಳಬಹುದು. ಪ್ರಯತ್ನ ಮಾಡೋಣ. ಯಶ ಭಗವಂತನಿಗೆ ಬಿಟ್ಟದ್ದು.

ಹರ್ಷವರ್ಧನ ವಿ. ಶೀಲವಂತ

good one .. nannu appreciate this

ಆತ್ಮೀಯರೇ,

ಪ್ರತಿಕ್ರಿಯೆಗೆ ಧನ್ಯವಾದಗಳು.

ಹರ್ಷವರ್ಧನ ವಿ. ಶೀಲವಂತ

ಭಲೇ ಕಿಲಾರಿ ಜೋಡಿ!!!
Very heartening to know the steps adopted by these like minded, hard working people. Where there is a Will there IS a way? it should be an example for other people too who suffer from water shortage.
Thanks Mr Harshvardhan for this enthusiastic article.
hey Anand and Arun (Teerthahalli/Shivamogga)???!!!! good work . keep it up
Happy New year to the team
:-)
malathi S

ಆತ್ಮೀಯ ಸು.ಶ್ರೀ. ಮಾಲತಿ ಅವರೇ,

ತಮ್ಮ ಸಕಾಲಿಕ ಹಾಗು ಹೃದಯ ಸ್ಪರ್ಷಿ ಪ್ರತಿಕ್ರಿಯೆಗೆ ಧನ್ಯವಾದಗಳು. ತಮ್ಮ ಶುಭ ಹಾರೈಕೆಗಳು ನಮಗೆ ಶ್ರೀ ರಕ್ಷೆ. ಹೀಗೆಯೇ ನಮ್ಮ ಬೆನ್ನು ತಟ್ಟುತ್ತಿರಿ. ತಪ್ಪಿದಾಗ ಹೇಳಿ. ಲೇಖನದ ಮೌಲ್ಯವರ್ಧನೆಗೆ ಸಹಕಾರಿಯಾಗುತ್ತದೆ.

ಹರ್ಷವರ್ಧನ ವಿ. ಶೀಲವಂತ

ನಾನು ಶಿಕ್ಷಕಿ.ಇತ್ತೀಚೆಗೆ ಸಂಪದವನ್ನು ಓದುತ್ತಿದ್ದೇನೆ.ನೀರಿನ ಸಂಗ್ರಹ ಹಾಗೂ ಬಳಕೆಯ ಬಗ್ಗೆ
ಅತ್ಯುತ್ತಮ ಲೇಖನಗಳು ಬರುತ್ತಿವೆ.ಅಂತರ್ಜಲ ಹಾಗೂ ಮಳೆನೀರಿನ ಸಂಗ್ರಹದ ಬಗ್ಗೆ ಶಾಲಾ ಮಕ್ಕಳಿಗೆ ಅರಿವು ಮೂಡಿಸಬೇಕೆಂಬ ಆಸೆಯಿದೆ. ನಿಮ್ಮ ಬಳಗದ ಯಾರಿಂದಲಾದರೂ ಸಹಾಯ
ಸಿಗಬಹುಂದೆಂದು ಆಶಿಸುತ್ತೇನೆ.ಯಾರನ್ನು ಸಂಪರ್ಕಿಸಬೇಕೆಂದು ದಯವಿಟ್ಟು ತಿಳಿಸಿ.

ಆತ್ಮೀಯ ಸು.ಶ್ರೀ. ಉಷಾ ಅವರೇ,

ತಮ್ಮ ಕಳಕಳಿ ಮೆಚ್ಚುವಂತಹುದು. ನಾನು ಸಹ ವೃತ್ತಿಯಿಂದ ಮಾಸ್ತರು. ನೀವು ಒಂದು ವಾರ ಮುಂಚಿತವಾಗಿ ನಮಗೆ ತಿಳಿಸಿ. ನಾನು ಸಮಯ ಹೊಂದಿಸಿಕೊಂಡು ತಮ್ಮ ಶಾಲೆಗೆ ಬರುತ್ತೇನೆ. ಹಾಗೆಯೇ ಸಾಧ್ಯವಾದರೆ ನನ್ನ ತಂಡದ ನಾಯಕರನ್ನು ಸಹ ಕರೆತರಲು ಪ್ರಯತ್ನಿಸುತ್ತೇನೆ.

ನನ್ನ ಜಿ. ಮೇಲ್ ಸಂಪರ್ಕಿಸಿ ನೀವು ಮಾಹಿತಿ ನೀಡಿ. harshavardhan.sheelavant@gmail.com

ಧನ್ಯವಾದಗಳು.

ಹರ್ಷವರ್ಧನ ವಿ. ಶೀಲವಂತ

i like this work

ಕಿಲಾರದ ಹತ್ತಿರದ ಊರಿನವಳು ನಾನು, ಊರಕಡೆಯ ಇಂಥ ಯಶೋಗಾಥೆಗಳ ಬಗ್ಗೆ ಕೇಳಲು ತುಂಬಾ ಖುಷಿಯಾಗುತ್ತದೆ.
ಸರೋಜಾ

Post new comment

The content of this field is kept private and will not be shown publicly.
CAPTCHA
This question is for testing whether you are a human visitor and to prevent automated spam submissions.