ಕಾರಮರಡಿಯ ಸೀನೀರು ಹೊಳೆ
೧೩೦ ಎಕರೆಗೆ ನೀರುಣಿಸುತ್ತಿದ್ದ ಅದ್ಭುತ ತಲಪರಿಗೆ. ‘ಹಂತ’ ವ್ಯವಸ್ಥೆ ಇಲ್ಲಿನ ವಿಶೇಷ. ೨೦೦೪ರಲ್ಲಿಯೂ ಸಹ ಈ ತಲಪರಿಗೆಯಿಂದ ಬೇಸಾಯ ಮಾಡಿದ್ದುಂಟು. ೪೦ ವರ್ಷಗಳಿಂದ ಗಂಕಾರರಾಗಿರುವ ನಾಗರಾಜುರವರ ಅನುಭವ ಇಲ್ಲಿದೆ.
ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕು ಕಸಬ ಹೋಬಳಿಯ ಕಾರಮರಡಿ ತಲಪುರಿಗೆ ನೈಸರ್ಗಿಕ ಜಲದ ಗುಂಡಿ. ಇದು ಸಿದ್ದಾಪುರ ಮತ್ತು ಮರಿತಿಮ್ಮನಹಳ್ಳಿ ದಾರಿಯಲ್ಲಿ ಸಿದ್ದಾಪುರ ಕೆರೆ ಕೋಡಿಹಳ್ಳದ ಪಕ್ಕದ ಮುಡುಪಣ್ಣನವರ ತೋಟದ ಬಳಿ ಇದೆ. ತಲಪುರಿಗೆಗೆ ಕಲ್ಲುಕಟ್ಟಡವಿದ್ದು ಕಲ್ಯಾಣಿಯನ್ನು ಹೋಲುತ್ತದೆ. ಲಿಂಗೇನಹಳ್ಳಿ ಸರ್ವೆ ನಂಬರ್ ೫೧ ರಲ್ಲಿ ನಾಲ್ಕು ಗುಂಟೆ ಪ್ರದೇಶದಲ್ಲಿ ತಲಪುರಿಗೆ ಇದ್ದು ಮುಖ್ಯ ಕಾಲುವೆಯು ಅಂದಾಜು ಒಂದೂವರೆ ಕಿಲೋಮೀಟರ್ ಇರುತ್ತದೆ.
ನನಗೆ ತಿಳಿದಂತೆ ಸಿದ್ದಾಪುರ ಕೆರೆ ಸುಮಾರು ೫೦೦ ವರ್ಷಗಳ ಹಿಂದೆ ಕಟ್ಟಲ್ಪಟ್ಟಿದೆ. ಆಗಿನಿಂದಲೂ ಈ ತಲಪುರಿಗೆ ಇರಬಹುದೆಂದು ಅಂದಾಜಾಗಿ ಹೇಳಬಹುದು. ಕೆರೆ ತುಂಬಿದಾಗಲೆಲ್ಲಾ ತಲಪುರಿಗೆಯಲ್ಲಿ ಸೀಪೇಜ್ ವಾಟರ್ ಬುಗ್ಗೆಯಂತೆ ಉಕ್ಕಿ ಬರುತ್ತದೆ.
ಹೀಗೆ ಉಕ್ಕಿದ ನೀರು ಒಂದೂವರೆ ಕಿ.ಮೀ. ವರೆಗೂ ಹರಿಯುತ್ತದೆ. ಅಲ್ಲಿಂದ ಅಚ್ಚುಕಟ್ಟಿನ ಮಟ್ಟ ಪ್ರಾರಂಭವಾಗುತ್ತದೆ. ಅಚ್ಚುಕಟ್ಟುದಾರ ರೈತರ ಜಮೀನುಗಳಿಗೆ ನೀರು ಹರಿಯಲು ಇಲ್ಲಿಂದ ಪ್ರಾರಂಭ. ಈ ಸ್ಥಳದಲ್ಲಿ ‘ಹಂತ’ವನ್ನು ಸ್ಥಾಪಿಸಲಾಗಿದೆ. ಹಂತವನ್ನು ಮೂರು ಭಾಗ ಮಾಡಿದ್ದು ತಲಪುರಿಗೆಯಿಂದ ಒಂದು ದೊಡ್ಡ ಕಾಲುವೆಯಲ್ಲಿ ಸಾಗಿ ಬಂದ ನೀರು ಇಲ್ಲಿ ಹಂತವನ್ನು ತಡಾದು ಮೂರು ಕಾಲುವೆಗಳಲ್ಲಿ ಮುಂದುವರೆಯುತ್ತದೆ.
ಈ ಕಾಲುವೆಗಳನ್ನು ಅಚ್ಚುಕಟ್ಟಿನ ಎತ್ತರ-ತಗ್ಗು ಪ್ರದೇಶಗಳನ್ನು ನೋಡಿಕೊಂಡು ಮಾಡಲಾಗಿದೆ. ಕಾಲುವೆಗಳಿಗೆ ಒಂದೊಂದಕ್ಕೂ ಬೇರೆ-ಬೇರೆ ಹೆಸರುಗಳಿವೆ. ಎತ್ತರದ ಪ್ರದೇಶಕ್ಕೆ ಹರಿಯುವ ಕಾಲುವೆಗೆ ‘ಮೇಗಳ ಕಾಲುವೆ’, ಇದಕ್ಕಿಂತ ಕಡಿಮೆ ಎತ್ತರಕ್ಕೆ ಹರಿಯುವ ಕಾಲುವೆಗೆ ‘ಹುವ್ವಿನ ತೋಟದ ಕಾಲುವೆ’, ಮತ್ತು ತಗ್ಗಿನ ಪ್ರದೇಶಕ್ಕೆ ಹರಿಯುವ ಕಾಲುವೆಯು ‘ಅಳುಗಿನ ಕಾಲುವೆ’. ಇವು ನಾವೇ ಇಟ್ಟುಕೊಂಡಿರುವ ಹೆಸರುಗಳು. ಈ ಕಾಲುವೆಗಳಿಗೆ ಬಿಜವಾರದ ಕೆರೆ ಅಂಗಳದವರೆಗೂ ಅಚ್ಚುಕಟ್ಟು ಪ್ರದೇಶವಿರುತ್ತದೆ. ಬಿಜವಾರ ಕೆರೆಯು ನಮ್ಮ ಕಾರಮರಡಿಯಿಂದ ಕೆಳಗೆ ಪೂರ್ವದಿಕ್ಕಿಗೆ ಸುಮಾರು ೪ ಕಿ.ಮೀ. ದೂರವಿದೆ.
ತಲಪುರಿಗೆ ನೀರಿಗೆ ೮೦ ಜನ ಅಚ್ಚುಕಟ್ಟುದಾರರು ಮತ್ತು ೧೩೦ ಎಕರೆ ಅಚ್ಚುಕಟ್ಟಿದೆ. ಕಾರಮರಡಿ, ಲಿಂಗೇನಹಳ್ಳಿ, ಮಧುಗಿರಿ ಟೌನ್, ಕಂಬತ್ತನಹಳ್ಳಿ, ಭಕ್ತರಹಳ್ಳಿ, ವಡೇರಹಳ್ಳಿ- ಹೀಗೆ ೬ ಗ್ರಾಮಗಳ ರೈತರು ಇದರ ಸುಪರ್ದಿಗೆ ಬರುತ್ತಾರೆ. ಕಾರಮರಡಿಯ ರೈತರದು ಹೆಚ್ಚಿನ ಅಚ್ಚುಕಟ್ಟಿದೆ. ಎಲ್ಲ ಜನಾಂಗಗಳ ರೈತರೂ ಅಚ್ಚುಕಟ್ಟಿನಲ್ಲಿ ಇದ್ದಾರೆ. ಒಕ್ಕಲಿಗರು ಸ್ವಲ್ಪ ಹೆಚ್ಚು.
ತಲಪುರಿಗೆಯಲ್ಲಿ ನೀರು ಉಕ್ಕಿ ಕಾಲುವೆಯಲ್ಲಿ ಹರಿದು ಹಂತವನ್ನು ಮುಟ್ಟಿದಾಗ ಕಾಲುವೆ ತೆಗೆಯಲು ಪ್ರಾರಂಭ ಮಾಡುತ್ತೇವೆ. ರೈತರುಗಳು ಆಳುಗಳ ಪ್ರಕಾರ- ಅಂದರೆ ಎಕರೆ ಅಥವಾ ಗುಂಟೆ ಆಧಾರದ ಮೇಲೆ ಆಳುಗಳನ್ನು ನಿಗದಿ ಮಾಡಿರುತ್ತೇವೆ- ಕಾಲುವೆ ತೆಗೆಯಲು ಬರುತ್ತಾರೆ. ಬೆಳಿಗ್ಗೆ ೮ ಗಂಟೆಗೆ ಎಲ್ಲರೂ ಕಾಲುವೆ ಬಳಿ ಸೇರಿ ಕೆಲಸಕ್ಕೆ ತೊಡಗುತ್ತೇವೆ. ರೈತರು ಕೆಲಸಕ್ಕೆ ಬರಲು ೩ ಬಾರಿ ತಮಟೆ ಹೊಡೆಸುತ್ತೇವೆ. ಇದಕ್ಕಾಗಿಯೇ ಕಾಲುವೆ ಮಣೆಗಾರರು ಇದ್ದಾರೆ. ಇವರ ಜವಾಬ್ದಾರಿಯೂ ಸಹ ವಂಶ ಪಾರಂಪರ್ಯವಾಗಿ ಬರುವಂತಹುದು. ಕಾಲುವೆ ಮಣೆಗಾರನು ಕಾಲುವೆ ಹತ್ತಿರ ಬಂದು ಬೆಳಿಗ್ಗೆ ೬ ಗಂಟೆಗೆ ಮೊದಲ ಸಾರಿ ತಮಟೆ ಬಡಿಯುತ್ತಾನೆ. ೭ ಗಂಟೆಗೆ ಎರಡನೇ ಸಾರಿ ಮತ್ತು ೮ ಗಂಟೆಗೆ ಮೂರನೇ ಹಾಗೂ ಕೊನೆಯ ಸಾರಿ ತಮಟೆ ಬಡಿಯುತ್ತಾನೆ. ೩ ನೇ ಸಲ ಹೊಡೆಯುವ ವೇಳೆಗೆ ಎಲ್ಲ ರೈತರೂ ಅಲ್ಲಿಗೆ ಬಂದಿರಬೆಕು. ಲೇಟಾಗಿ ಬಂದವರಿಗೆ ದಂಡ (ಕುಂತ್ಲು) ಹಾಕಲಾಗುತ್ತದೆ ಮತ್ತು ಅವರಿಗೆ ನೀರು ಕಡಿತ.
ಮಣೆಗಾರನು ತಮಟೆಯನ್ನು ಚೆನ್ನಾಗಿ ಬೆಂಕಿ ಕಾಯಿಸಿ ಹೊಡೆಯುವುದರಿಂದ ಅದರ ಸದ್ದು ದೂರದ ಊರುಗಳಿಗೂ ಕೇಳಿಸುತ್ತದೆ. ಅಲ್ಲದೆ ಮುಂಚಿನಿಂದಲೂ ಈ ಪದ್ಧತಿ ಬೆಳೆದು ಬಂದಿರುವುದರಿಂದ ಸಾಮಾನ್ಯವಾಗಿ ರೈತರಿಗೆ ಕಾಲುವೆ ಕೆಲಸದ ಅರಿವಿರುತ್ತದೆ. ಕೆಲಸಕ್ಕೆ ಬರದವರಿಗೆ ನೀರು ಬಿಡುವುದಿಲ್ಲವಾದ್ದರಿಂದ ತಪ್ಪದೇ ಅವರು ಬಂದೇ ಬರುತ್ತಾರೆ. ನಯಾ ಪೈಸೆ ಖರ್ಚಿಲ್ಲದೆ ಒಳ್ಳೆಯ ನೀರು ಬೆಳೆಗೆ ಸಿಕ್ಕುವುದರಿಂದ ಯಾರೂ ಸಹ ಅದನ್ನು ಕಳೆದುಕೊಳ್ಳಲು ಸಿದ್ದರಿರುವುದಿಲ್ಲ. ಸ್ವತಃ ಹೊಲದ ಯಜಮಾನರು ಬರಲಾಗದಿದ್ದರೆ ಕೂಲಿ ಕೊಟ್ಟು ಆಳುಗಳನ್ನು ಕಳಿಸುತ್ತಾರೆ.
ಕಾಲುವೆ ಕೆಳಭಾಗದಿಂದ- ಅಂದರೆ ‘ಹಂತ’ದ ಕಡೆಯಿಂದ ಕೆಲಸ ಪ್ರಾರಂಭಿಸುತ್ತೇವೆ. ಇಲ್ಲಿಂದ ಅರ್ಧ ಕಿ.ಮೀ. ದೂರದಲ್ಲಿ ಕಾಲುವೆ ಪಕ್ಕದಲ್ಲಿ ಬ್ರಹ್ಮದೇವರ ಸ್ಥಳವಿದೆ. ಇಲ್ಲಿಗೆ ಕೆಲಸ ಬಂದಾಗ ದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ. ಅಲ್ಲಿಂದ ಮುಂದೆ ಕಾಲುವೆ ತೆಗೆಯುತ್ತಾ ತಲಪುರಿಗೆ ಹತ್ತಿರ ಬಂದಾಗ ಅಲ್ಲಿ ಗಂಗಾದೇವಿ ಪೂಜೆ ಮಾಡುತ್ತೇವೆ. ಕಾಲುವೆಯಲ್ಲಿ ಅಡ್ದ ಸಿಕ್ಕಿದ ಮರಗಿಡಗಳನ್ನು ಕಡಿದು ಹರಾಜು ಹಾಕಿ ಬಂದ ಹಣವನ್ನು ಕಾಲುವೆ ಫ಼ಂಡಿಗೆ ಹಾಕಿಕೊಳ್ಳುತ್ತೇವೆ.
ನಮ್ಮ ತಲಪುರಿಗೆ ಕಾಲುವೆಯಿಂದ ಸುಮಾರು ೧೦ ಸಾವಿರ ಜನರಿಗೆ ಅನ್ನ ಸಿಗುತ್ತದೆ. ಅಲ್ಲದೆ ಕಾಲುವೆ ಕೆಲಸ ಮಾಡಿ ನೀರು ಸರಾಗವಾಗಿ ಹರಿಯಲು ಶುರುವಾದ ಮೇಲೆ ಬಿಜವಾರ ಕೆರೆಯವರೆವಿಗೂ ಈ ಕಾಲುವೆ ಅಚ್ಚುಕಟ್ಟಿನ ಆಚೆ-ಈಚೆ ಜಮೀನುಗಳಲ್ಲಿರುವ ಬಾವಿಗಳು ಸಹ ಸೀಪೇಜ್ ಆಗಿ ಆ ಜನರಿಗೂ ಸಹ ಅನುಕೂಲವಾಗುತ್ತದೆ.
ದಂಡ ಹಾಕಿದ್ದರಿಂದ ಮತ್ತು ಕಾಲುವೆ ಅಕ್ಕ-ಪಕ್ಕದ ಗಿಡ-ಮರಗಳ ಹರಾಜಿನಿಂದ ಬಂದ ಹಣದಿಂದ ವರ್ಷಕ್ಕೊಮ್ಮೆ ಕಾಲುವೆ ಬಳಿ ಜಾತ್ರೆ ಮಾಡಿ ಬಂದವರಿಗೆಲ್ಲಾ ಅನ್ನ ಹಾಕುತ್ತೇವೆ. ಸುಮಾರು ೨ ರಿಂದ ೩ ಸಾವಿರ ಜನ ಅಂದು ಊಟ ಮಾಡುತ್ತಾರೆ. ಮುಂಚಿನಿಂದಲೂ ಇದು ಬೆಳೆದು ಬಂದಿದೆ.
ಸಿದ್ದಾಪುರ ಕೆರೆ ತುಂಬುವುದು ಕಡಿಮೆಯಾದಾಗಿನಿಂದ ನಮ್ಮ ತಲಪುರಿಗೆಯಲ್ಲಿಯೂ ನೀರು ಕಡಿಮೆಯಾಯಿತು. ಅಲ್ಲದೆ ತಲಪುರಿಗೆ ಪಕ್ಕದಲ್ಲೇ ಆ ಜಮೀನಿನವರು ಕೊಳವೆ ಬಾವಿ ಹಾಕಿಸಿದ್ದರಿಂದಲೂ ನೀರು ಕಡಿಮೆಯಾಯಿತೆನ್ನಬಹುದು. ಆ ಕೊಳವೆ ಬಾವಿಯಲ್ಲಿ ಸಮೃದ್ಧವಾಗಿ ನೀರು ಸಿಕ್ಕಿ ಈಗಲೂ ಸಹ ನೀರು ಬರುತ್ತಿದೆ. ಈಗ್ಗೆ ೩ ವರ್ಷಗಳ ಹಿಂದೆ- ಅಂದರೆ ೨೦೦೪ ರಲ್ಲಿ ತಲಪುರಿಗೆ ನೀರಿನಿಂದ ಬೆಳೆ ತೆಗೆದಿದ್ದೆವು. ಅದಕ್ಕೂ ಮುಂಚೆ ಕೆಲವು ವರ್ಷಗಳು ಬರಗಾಲದಿಂದ ತಲಪುರಿಗೆ ಒಣಗಿತ್ತು. ೧೯೯೦ ರಿಂದಲೂ ಪರಿಸ್ಥಿತಿ ಹೀಗೇ ಇತ್ತು.
ಆದ್ದರಿಂದ ನಾವೆಲ್ಲ ಸೇರಿ ತಲಪುರಿಗೆಗೆ ಹತ್ತಿರ ಕೊಳವೆ ಬಾವಿಗಳನ್ನು ಹಾಕಿಸಿ ಆ ನೀರನ್ನು ಕಾಲುವೆ ಮೂಲಕ ಹರಿಸಿ ನಿರಂತರ ವ್ಯವಸಾಯ ಮಾಡುವ ಬಗ್ಗೆ ತೀರ್ಮಾನಿಸಿದೆವು. ಭೂಗರ್ಭ ಶಾಸ್ತ್ರ್ರಜ್ಞರಿಂದ ಸ್ಥಳ ತನಿಖೆಯನ್ನೂ ಸಹ ಮಾಡಿಸಿದ್ದೆವು. ಅವರು ಮೂರು ಪಾಯಿಂಟುಗಳನ್ನು ಗುರುತಿಸಿ ತುಂಬಾ ನೀರಿದೆ ಎಂದು ವರದಿ ನೀಡಿದ್ದರು. ನಮಗೆ ಸೇರಿದ ನಾಲ್ಕು ಗುಂಟೆ ಪ್ರದೇಶದಲ್ಲಿ ೩ ಕೊಳವೆ ಬಾವಿಗಳನ್ನು ಕೊರೆಸಿ ಆ ನೀರನ್ನು ಮೂರು ಒಂದು ಟ್ಯಾಂಕಿಗೆ ತುಂಬಿಸಿ ಅಲ್ಲಿಂದ ಕಲ್ಯಾಣಿಯಿಂದ ಕಾಲುವೆಗೆ ಹರಿಸುವ ಯೋಜನೆ ನಮ್ಮದಾಗಿತ್ತು.ಹೀಗೆ ಮಾಡಿದರೆ ವರ್ಷೊಂಭತ್ತು ಕಾಲವೂ ಕಾಲುವೆಯಲ್ಲಿ ನೀರು ಹರಿಯುತ್ತದೆ ಎಂದು ಲೆಕ್ಕ ಹಾಕಿದ್ದೆವು. ಕೊಳವೆ ಬಾವಿ ಹಾಕಿಸಲು ಸರ್ಕಾರಕ್ಕೆ ಅನೇಕ ಅರ್ಜಿಗಳನ್ನು ಸಲ್ಲಿಸಿದರೂ ಸಹ ಕಳೆದ ೧೫ ವರ್ಷಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿರುವುದಿಲ್ಲ.
- 1217 reads
Email this page
Printer-friendly version
ಲೇಖಕರು
ಹೆಸರು
ಧಾನ್ಯ ಸಂಸ್ಥೆ
ಪರಿಚಯ
ಜಲಸಿರಿ ಪತ್ರಿಕೆ ಕುರಿತು ನಾಲ್ಕು ಮಾತು
ಮಾನವ ಮತ್ತು ಪರಿಸರ ಅಭಿವೃದ್ಧಿಯನ್ನು ಮುಖ್ಯ ದ್ಯೇಯವನ್ನಾಗಿಟ್ಟುಕೊಂಡು ಕೆಲಸ ನಿರ್ವಹಿಸುತ್ತಿರುವ ತುಮಕೂರಿನ ‘ದಾನ್ಯ’ ಸಂಸ್ಥೆಯು ಪ್ರಕಟಿಸುತ್ತಿರುವ ತ್ರೈಮಾಸಿಕ ಪತ್ರಿಕೆ “ಜಲಸಿರಿ ನೀರ ನೆಮ್ಮದಿಗಾಗಿ”. ನೀರಿನ ಸುದ್ದಿಗಳಿಗಾಗಿಯೇ ಮೀಸಲಾದ ಈ ಪತ್ರಿಕೆ ೨೦೦೫ರ ಆಗಸ್ಟ್ ನಿಂದ ಪ್ರಕಟಗೊಳ್ಳುತ್ತಿದೆ. ನೀರಿನ ವಿವಿಧ ಆಯಾಮಗಳ ಬಗ್ಗೆ ಸುದ್ದಿ ಪ್ರಕಟಿಸುವ ಮೂಲಕ ಜನಸಾಮಾನ್ಯರಲ್ಲಿ ಜಲ ಸಾಕ್ಷರತೆ ಮೂಡಿಸುವುದು. ಇದರ ಧ್ಯೇಯ.
ಪ್ರಸ್ತುತ ಪರಿಸ್ಥಿತಿಯಲ್ಲಿ ನೀರು ಬಹು ಚರ್ಚಿತ ವಿಷಯ. ಬಳಕೆ ಯೋಗ್ಯ ನೀರಿನ ಲಭ್ಯತೆ ಕಡಿಮೆಯಾಗುತ್ತಿರುವುದು, ನೀರಿನ ವ್ಯಾಪಾರೀಕರಣ, ಖಾಸಗೀಕರಣ ಶುರುವಾಗಿರುವ ಈ ಹಂತದಲ್ಲಿ ನೀರಿನ ಸುದ್ದಿಗಳಿಗೇ ಮೀಸಲಾದ ಪತ್ರಿಕೆಯೊಂದರ ಅಗತ್ಯವಿದೆ ಎಂಬ ಆಶಯದಿಂದ ಸಮಾನಾಸಕ್ತ ಗೆಳೆಯರ ಉಸ್ತುವಾರಿಯಲ್ಲಿ ಪತ್ರಿಕೆ ಪ್ರಕಟಗೊಳ್ಳುತ್ತಿದೆ.
ನೀರಿನ ಸಮಸ್ಯೆಗಳಿಗೆ ಪರಿಹಾರವಾಗಬಲ್ಲ ಚಿಕ್ಕ-ಚಿಕ್ಕ ಪ್ರಯತ್ನಗಳು, ಸಮುದಾಯದ ಮಟ್ಟದಲ್ಲಿ ನಡೆದಿರುವ ಯಶೋಗಾಥೆಗಳನ್ನು ಪ್ರಕಟಿಸುವುದು. ಸರಳ ಮತ್ತು ಸುಲಭ ಜಲ ಸಂರಕ್ಷಣಾ ಪದ್ಧತಿಗಳನ್ನು ಪರಿಚಯಿಸುವುದು. ನೀರಿನ ಸಂರಕ್ಷಣೆ ಹಾಗೂ ಬಳಕೆ ಕುರಿತಾದ ಪಾರಂಪರಿಕ ಜ್ಞಾನದ ಪ್ರಕಟಣೆ ಹಾಗೂ ದಾಖಲಾತಿ. ನೀರುಳಿತಾಯ, ನೀರಿನ ಮರುಬಳಕೆ, ಮಳೆನೀರು ಸಂಗ್ರಹ, ಚಾವಣಿ ನೀರು ಸಂಗ್ರಹ, ಪರಿಸರ ಪೂರಕ ನೈರ್ಮಲ್ಯ ಇತ್ಯಾದಿಗಳ ಬಗ್ಗೆ ಸರಳ ಉಪಾಯಗಳನ್ನು ಪರಿಚಯಿಸುವುದು ಹಾಗೂ ಈ ನಿಟ್ಟಿನಲ್ಲಿ ಯಶಸ್ವಿಯಾದವರ ಬಗ್ಗೆ ಮಾಹಿತಿ ನೀಡುವುದು ಪತ್ರಿಕೆಯ ಆದ್ಯತೆ.
ಪ್ರತಿ ಸಂಚಿಕೆಯನ್ನು ಆಯಾ ಕಾಲದ ಮಳೆ ನಕ್ಷತ್ರಗಳ ಆಧಾರದಲ್ಲಿ ಗುರುತಿಸಲಾಗುತ್ತಿದೆ. ನಮ್ಮ ಗ್ರಾಮೀಣ ಜನತೆಯ ಬದುಕು, ದುಡಿಮೆಗಳೆಲ್ಲಕ್ಕೂ ಮಳೆ ನಕ್ಷತ್ರಗಳೇ ಮೂಲವಾಗಿರುವುದರಿಂದ ಇದು ಸೂಕ್ತ ಎನಿಸುತ್ತದೆ. ‘ಸಂಪುಟ’ ಎಂಬುದಕ್ಕೆ ಬದಲಾಗಿ ‘ವರ್ಷ’ ಎಂದು ಬಳಸಲಾಗುತ್ತಿದೆ. ಜನರ ಆಡು ಮಾತನ್ನೇ ಸಾದ್ಯವಾದಷ್ಟು ಬಳಸಬೇಕೆನ್ನುವುದು ಇದರ ಉದ್ದೇಶ. ಸ್ವಂತ ಅನುಭವದ ಹಾಗೂ ಕೃಷಿಕರ ಬರಹಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ನೆಲ-ಜಲ ಉಳಿವಿಗೆ ಜನಾಂದೋಲನ ರೂಪಿಸುತ್ತಿರುವ ಹಿರಿಯರಾದ ‘ಶ್ರೀ’ ಪಡ್ರೆಯವರು ಆರಂಭದಿಂದಲೂ ಪತ್ರಿಕೆಯ ಆಶಯಗಳಿಗೆ ಬೆಂಬಲ ಸೂಚಿಸುತ್ತಿದ್ದಾರೆ. ನೀರು ಮತ್ತು ನೀರ ಬಳಕೆಗೆ ಸಂಬಂಧಪಟ್ಟಂತೆ ಬಳಕೆಯಾಗುವ ಪದ/ಶಬ್ದಗಳನ್ನು ಪರಿಚಯಿಸುವ ‘ನೀರ ಪದ’ ಅಂಕಣವನ್ನು ಪ್ರಾರಂಭಿಸಲಾಗಿದೆ.
ನೀರುಳಿತಾಯ, ನೀರಿನ ಸಮರ್ಥ ನಿರ್ವಹಣೆಯ ಬಗ್ಗೆ ಓದುಗರಲ್ಲಿ ಅರಿವು ಮೂಡಿಸಿ ಅವರ ಮನೋಭಾವದಲ್ಲಿ ಬದಲಾವಣೆಯನ್ನುಂಟು ಮಾಡಲು ಪತ್ರಿಕೆ ಆಶಿಸುತ್ತದೆ.
ವಿಶೇಷ ಬರಹಗಳು
ಇತ್ತೀಚಿನ ಬ್ಲಾಗ್ ಬರಹಗಳು
- ಫೊಟೊ ಅಲ್ಬಮ್
- ಗಣಿಗಾರಿಕೆಯಲ್ಲಿ- ತಡೆಆಣೆಕಟ್ಟು (ಚೆಕ್-ಡ್ಯಾ೦)
- ಪ್ರಥಮ್ ಬುಕ್ಸ್ ""ಕಾವೇರಿ" ಪುಸ್ತಕದ ಬಿಡುಗಡೆ ಮತ್ತು "ನಿಮ್ಮ ನದಿಯನ್ನು ಕಾಪಾಡಿ ನೀರನ್ನು ಉಳಿಸಿ" ಆಂದೋಲನ
- ಇಲ್ಲಿ ‘ಕೊಳಚೆ ನೀರು ಕುಡಿಯುವ ನೀರು’!`ಪಲ್ಸಡ್ ಪ್ಲೇಟ್' ತಂತ್ರಜ್ಞಾನ ಎಸ್.ಡಿ.ಎಂ. ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಗಳ ಆವಿಷ್ಕಾರ.
- ಮಳೆ ಬಂದರೆ ಬೆಂಗಳೂರಿಗೆ ಭೇದಿ
- ಮಳೆ ಎಂದರೆ ಬಾಲ್ಯದ ನೆನಪು ಕಣಾ...
- ನಾವು ವೃತ್ತಿ/ಕೆಲಸ ಮಾಡುವಲ್ಲಿ ನೀರಿನ ಮಿತಬಳಕೆಯ ಬಗ್ಗೆ ಜಾಗೃತಿ ಹೇಗೆ ಮೂಡಿಸಬಹುದು ?
- ರೇಡಿಯೋದಲ್ಲಿ K2K
- ಮಡಿವಾಳ ಕೆರೆಯ ಉಳಿಸಿ - ಒಂದು ಕೂಗು
- ಕೆರೆ ಕರಗುವ ಸಮಯ: ನಿಮಗಿದೋ ಆಮಂತ್ರಣ
ಇತ್ತೀಚಿನ ಪ್ರತಿಕ್ರಿಯೆ
- Re: This is very nice in
2 weeks 5 days ago - Re: ಇಲ್ಲಿ ‘ಕೊಳಚೆ ನೀರು ...
3 weeks 4 days ago - Re: ‘ಇರುವೆ’; ಅಂತರ್ಜಲ ...
12 weeks 2 days ago - Re: ನಮ್ಮ ಮನೆಯ ತಾರಸಿ ಮೇಲೆ ...
12 weeks 6 days ago - Re: ‘ಕುಡಿಯಲು ಬಿಲ್ಕುಲ್ ...
15 weeks 2 days ago - Re: ಧಾರವಾಡದ ನೆಲ ನುಂಗಿ; ...
16 weeks 4 days ago - Re: ದೇಸಿ ತಂತ್ರಜ್ಞಾನದಿಂದ ...
18 weeks 1 hour ago - Re: ದೇಸಿ ತಂತ್ರಜ್ಞಾನದಿಂದ ...
18 weeks 3 days ago - Re: ಧಾರವಾಡದ ಮೂಕಾಂಬಿಕಾ ...
22 weeks 6 days ago - Re: ಮಳೆ ಎಂದರೆ ಬಾಲ್ಯದ ...
23 weeks 6 days ago
| Subscribe to IWP Kannada list |
| Visit this group |










ಸಂಬಂಧ ಪಟ್ಟವರ ಗಮನಕ್ಕೆ,
ಸರಕಾರ ಸಹಕಾರ ಕೊಡದಿದ್ದರೆ, ಅದಕ್ಕೆ ಕಾರಣ ಏನೆಂದು ತಿಳಿದುಕೊಂಡಿರಾ? ಕೊಳವೆ ಬಾವಿ ಕೊರ್ಯುವುದರಿಂದ ಮುಂದೆ ಏನೂ ಅನಾಹುತ ಆಗುವುದಿಲ್ಲವೇ? ಎಷ್ಟು ದಿನ ಕೊಳವೆ ಬಾವಿಯಲ್ಲಿ ನೀರು ಸಿಗಬಹುದು? ಈ ಎಲ್ಲ ವಿಷಯಗಳಿಗೆ ಸೂಕ್ತ ಸಮಾಧಾನ ಇದ್ದರೆ, ನಾನು ನಮ್ಮ ಸ್ನೇಹಿತರೊಡಗೂಡಿ ಹಣವನ್ನು ಒಟ್ಟುಗೂಡಿಸಿ ನಿಮಗೆ ಸಹಾಯ ಮಾಡಲು ಪ್ರಯತ್ನಿಸುತ್ತೇನೆ.
ನೀರ್ಚಿ೦ತಕ
ಅನಂತ ಕೃಷ್ಣ
Post new comment