ಅನ್ನ ತಿನ್ನುವವರು ನೀರುಳಿಸುವ ವಿಧಾನ

ಭತ್ತದ ಗದ್ದೆ

ದಕ್ಷಿಣ ಭಾರತದ ಮಟ್ಟಿಗೆ ಅಕ್ಕಿ ಬಹುಮುಖ್ಯ ಆಹಾರ ಧಾನ್ಯ. ನಮ್ಮ ಆಹಾರ ಪದ್ಧತಿಯ ಮೇಲೆ ಹೀಗೇ ಗಮನಹರಿಸಿದರೆ ಇದು ಅರ್ಥವಾಗುತ್ತದೆ. ಸಾಮಾನ್ಯವಾಗಿ ಬೆಳಗಿನ ಉಪಹಾರಕ್ಕೆ ನಾವು ಬಳಸುವುದು ದೋಸೆ, ಇಡ್ಲಿ, ಕಡುಬು, ಶ್ಯಾವಿಗೆ, ಚಿತ್ರಾನ್ನ, ಪಲಾವ್ ಇವೆಲ್ಲವೂ ಅಕ್ಕಿಯಿಂದಲೇ ತಯಾರಾಗುವ ಖಾದ್ಯಗಳು. ಊಟದ ವಿಷಯಕ್ಕೆ ಬಂದರೆ ಅದರಲ್ಲಿಯೂ ಅನ್ನವೇ ಮುಖ್ಯ.

ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆ (NSSO)ನೀಡುವ ಅಂಕಿ-ಅಂಶಗಳಂತೆ ಭಾರತೀಯ ತಲಾ ಅಕ್ಕಿ ಬಳಕೆ ತಿಂಗಳೊಂದಕ್ಕೆ 4.71 ಕಿಲೋಗ್ರಾಂಗಳು. ಈ ಸರಾಸರಿಯಲ್ಲಿ ಅಕ್ಕಿ ಮುಖ್ಯ ಆಹಾರವಾಗಿರದ ಉತ್ತರ ಭಾರತದ ಜನಸಂಖ್ಯೆಯೂ ಸೇರಿರುವುದರಿಂದ ಕರ್ನಾಟಕದ ತಲಾ ಅಕ್ಕಿಬಳಕೆ ತಿಂಗಳೊಂದಕ್ಕೆ ಕನಿಷ್ಠ ಐದು ಕಿಲೋಗ್ರಾಮ್ ಗಳೆಂದು ಭಾವಿಸಬಹುದು. ತಿಂಗಳಿಗೆ ಐದು ಕಿಲೋಗ್ರಾಮ್ ಅಕ್ಕಿ ತಿನ್ನುವ ನಾವು ಆ ಮೂಲಕ ಪರೋಕ್ಷವಾಗಿ ಬಳಸುವ ನೀರಿನ ಪ್ರಮಾಣವೆಷ್ಟು ಗೊತ್ತೆ. 25,000 ಲೀಟರ್. ಒಂದು ಕಿಲೋಗ್ರಾಮ್ ಅಕ್ಕಿಯ ಉತ್ಪಾದನೆಗೆ ಐದು ಸಾವಿರ ಲೀಟರ್ ಗಳಷ್ಟು ನೀರು ಬೇಕು. ಕರ್ನಾಟಕದ ಐದು ಕೋಟಿ ಜನತೆ ತಿಂಗಳಿಗೆ ಐದು ಕಿಲೋಗ್ರಾಮ್ ಅಕ್ಕಿ ಬಳಸುತ್ತಾರೆ ಎಂದು ಊಹಿಸಿ ಲೆಕ್ಕ ಹಾಕಿದರೆ ಬಳಕೆಯಾಗುವ ನೀರಿನ ಪ್ರಮಾಣವೆಷ್ಟ್ಟು?

ಒಂದು ತಿಂಗಳಿಗೆ ನಾವು ಅಕ್ಕಿ ಬಳಸುವ ಮೂಲಕ ಖರ್ಚು ಮಾಡುವ ನೀರು 12500,00,00,000 ಲೀಟರುಗಳು. ಅಂದರೆ ಬೆಂಗಳೂರಿನ ನಾಗರಿಕರು ಪಾವತಿಸುವ ನೀರಿನ ಕನಿಷ್ಠ ದರದ ಅನ್ವಯ ಈ ನೀರಿನ ಬೆಲೆಯನ್ನು ನಿರ್ಧರಿಸಿದರೆ 75 ಕೋಟಿ ರೂಪಾಯಿಗಳಾಗುತ್ತದೆ. ಗರಿಷ್ಠ ದರ 450 ರೂಪಾಯಿಗಳಾಷ್ಟಾಗುತ್ತದೆ. ಈ ನೀರಿನ ಬಳಕೆಯ ಲೆಕ್ಕಾಚಾರದಲ್ಲಿ ಕುಸುಲಕ್ಕಿ ಮಾಡುವುದಕ್ಕಾಗಿ ಭತ್ತವನ್ನು ಬೇಯಿಸಲು ಬಳಸುವ ನೀರು, ಅಡುಗೆಗೆ ಮೊದಲು ಅಕ್ಕಿಯನ್ನು ತೊಳೆಯಲು ಬಳಸುವ ನೀರು, ಅಕ್ಕಿಯನ್ನು ಬೇಯಿಸಲು ಬಳಸುವ ನೀರಿನ ಪ್ರಮಾಣವನ್ನು ಸೇರಿಸಿಲ್ಲ. ಅದನ್ನೂ ಸೇರಿಸಿಕೊಂಡರೆ ನಾವು ಅನ್ನ ತಿನ್ನುವ ಹೊತ್ತಿಗೆ ಪ್ರತೀ ಕಿಲೋಗ್ರಾಮ್ ಅಕ್ಕಿಯ ಮೇಲೆ ಖರ್ಚಾಗುವ ನೀರಿನ ಪ್ರಮಾಣ 5000 ಲೀಟರ್ ಗಳನ್ನು ಮೀರುತ್ತದೆ.

ಅಕ್ಕಿ ಉತ್ಪಾದನೆಗೆ ಅಥವಾ ಭತ್ತದ ಬೆಳೆಗೆ ಬಳಕೆಯಾಗುವ ನೀರಿನ ಪ್ರಮಾಣವನ್ನು ಕಡಿಮೆ ಮಾಡಿದರೆ ನಾವು ಉಳಿಸುವ ನೀರಿನ ಪ್ರಮಾಣ ಬಹಳ ದೊಡ್ಡದು. ಪ್ರತೀ ವರ್ಷ ಭತ್ತದ ಬೆಳೆಗೆ ಬಳಕೆಯಾಗುವ ನೀರನ್ನು ಅರ್ಧದಷ್ಟು ಕಡಿಮೆ ಮಾಡಲು ಸಾಧ್ಯವಾದರೆ ತಮಿಳುನಾಡು ಮತ್ತು ಕರ್ನಾಟಕಗಳು ಕಾವೇರಿ ನೀರಿಗೆ ಸಂಬಂಧಪಟ್ಟಂತೆ ಪರಸ್ಪರ ಕಚ್ಚಾಡದೇ ಇರಬಹುದು. ಹೀಗೆ ಕಡಿಮೆ ಮಾಡುವುದೇನು ಕಷ್ಟದ ಅಥವಾ ಅಸಾಧ್ಯವಾದ ಕೆಲಸವಲ್ಲ. ಹೆಚ್ಚು ನೀರು ಬಳಸುವ ರೂಢಿಯನ್ನು ಕೈಬಿಡಲು ರೈತರು ಸಿದ್ಧರಿಲ್ಲ. ಕೆಲವು ಪ್ರಗತಿಪರ ರೈತರು ಆಗಲೇ ಈ ದಿಕ್ಕಿನಲ್ಲಿ ಹೆಜ್ಜೆಯಿಟ್ಟಿದ್ದಾರೆ. ಉಳಿದವರಿಗೂ ಇದು ಪ್ರೇರಣೆಯಾಗಬೇಕಿದೆ.

***
ಭತ್ತದ ಕೃಷಿಗೆ ಇಷ್ಟೊಂದು ನೀರಿನ ಅಗತ್ಯವಿದೆಯೇ? ಈ ಪ್ರಶ್ನೆ ಜಗತ್ತಿನ ವಿವಿಧೆಡೆ ಬಹಳ ಹಿಂದೆಯೇ ಹುಟ್ಟಿಕೊಂಡಿತ್ತು. ನಮ್ಮ ರೈತರನ್ನೂ ಈ ಪ್ರಶ್ನೆ ಕಾಡಿತ್ತು. ಅದರಿಂದಾಗಿಯೇ ನೀರನ್ನು ಕಡಿಮೆ ಬಳಸುವ ಅನೇಕ ವಿಧಾನಗಳು ಬಹಳ ಹಿಂದಿನಿಂದಲೂ ಬಳಕೆಯಲ್ಲಿವೆ. ಅರೆ ಮಲೆನಾಡು ಪ್ರದೇಶಗಳಲ್ಲಿ ಭತ್ತವನ್ನು ನೇರವಾಗಿ ಬಿತ್ತನೆ ಮಾಡುವ ವಿಧಾನವೊಂದು ಈಗಲೂ ಇದೆ. ಇದನ್ನು ಒಣಬಿತ್ತನೆ ಎಂದು ಕರೆಯಲಾಗುತ್ತದೆ. ಕೆಸರುಗದ್ದೆಯಲ್ಲಿ ಪೈರನ್ನು ನಾಟಿ ಮಾಡುವ ವಿಧಾನದ ಬದಲಿಗೆ ಇದು ಬಳಕೆಯಾಗುತ್ತದೆ. ರಾಗಿ, ಜೋಳ ಇತ್ಯಾದಿಗಳನ್ನು ಬಿತ್ತುವ ವಿಧಾನವನ್ನು ಹೋಲುವ ಈ ತಂತ್ರ ಈಗ ಕಡಿಮೆಯಾಗಿದೆ. ಕಡಿಮೆ ನೀರಿನಲ್ಲಿ ಭತ್ತ ಬೆಳೆಯುವ ಶ್ರೀ ಪದ್ಧತಿ ಅಥವಾ ಮಡಗಾಸ್ಕರ್ ವಿಧಾನಕ್ಕೆ ಇದನ್ನು ಕಸಿ ಮಾಡಿ ಮರು ಜೀವಕೊಡಲಾಗಿದೆ. ಬೈಫ್ ನೇತೃತ್ವದಲ್ಲಿ ಇದನ್ನು ಪ್ರಚಾರ ಮಾಡುವ ಕೆಲಸವೂ ಈಗಾಗಲೇ ಚಾಲನೆಯಲ್ಲಿದೆ.

ಈ ವಿಧಾನವನ್ನು ಬಳಸುವುದಕ್ಕೆ ಬಿತ್ತನೆ ಕೌಶಲ್ಯ ತಿಳಿದಿರಬೇಕು. ದುರದೃಷ್ಟವಶಾತ್ ಈ ಕೌಶಲ್ಯವನ್ನು ಅರಿತವರ ಸಂಖ್ಯೆ ಕಡಿಮೆ ಇದೆ. ಮಡಗಾಸ್ಕರ್ ವಿಧಾನದ ಜತೆಗೆ ಇದನ್ನು ಕಸಿ ಮಾಡಿ ಬಳಸುತ್ತಿರುವುದರಿಂದ ಬಿತ್ತನೆಯಲ್ಲಿ ನುರಿತವರಿಗೆ ಮತ್ತೆ ಬೆಲೆ ಬಂದಿದೆ. ತಂತ್ರವನ್ನು ಹೊಸ ತಲೆಮಾರು ಕಲಿತುಕೊಳ್ಳುತ್ತಿದೆ.

ಭತ್ತ ಬೆಳೆಯುವುದಕ್ಕೆ ಕೆಸರುಗದ್ದೆ ತಂತ್ರ ಅಥವಾ ಫ್ಲಡ್ ಇರಿಗೇಶನ್ ತಂತ್ರವನ್ನು ಬಳಸುವುದಕ್ಕೂ ಭತ್ತದ ಪೈರಿನ ನೀರಿನ ಬೇಡಿಕೆಗೂ ಅರ್ಥಾರ್ಥ ಸಂಬಂಧವಿಲ್ಲ. ಭತ್ತದ ಗದ್ದೆಯಲ್ಲಿ ಬೆಳೆಯುವ ಕಳೆಯನ್ನು ತಡೆಗಟ್ಟಲು ಈ ತಂತ್ರ ಬಳಕೆಯಾಗುತ್ತದೆ. ಭತ್ತದ ಪೈರಿಗೂ ಕಳೆಗಳ ಎತ್ತರಕ್ಕೂ ಇರುವ ಸಂಬಂಧವಿದು. ಭತ್ತದ ಪೈರಿಗಿಂತ ಎತ್ತರದಲ್ಲಿ ಚಿಕ್ಕದಾಗಿರುವ ಕಳೆಗಳು ಸತ್ತು ಹೋಗುತ್ತವೆ. ಹಾಗಿದ್ದರೆ ನೇರ ಬಿತ್ತನೆ ಅಥವಾ ಒಣಬಿತ್ತನೆ ವಿಧಾನವನ್ನು ಅನುಸರಿಸುವವರಿಗೆ ಈ ತೊಂದರೆ ಎದುರಾಗುವುದಿಲ್ಲವೇ?

ಅವರಿಗೂ ಕಳೆಯ ಸಮಸ್ಯೆ ಇದೆ. ಅದನ್ನು ಅವರು ಪರಿಹರಿಸಿಕೊಳ್ಳುವುದು ಹರತೆಗಳ ಮೂಲಕ. ಭತ್ತದ ಪೈರು ಬೆಳೆಯುವ ವಿವಿಧ ಹಂತಗಳಲ್ಲಿ ಕಳೆ ತೆಗೆದು ಹಾಕಲು ಈ ತಂತ್ರ ಬಳಕೆಯಾಗುತ್ತದೆ. ಉಳುಮೆಯನ್ನು ಹೋಲುವ ಈ ಕ್ರಿಯೆ ಭತ್ತದ ಪೈರಿನ ಎರಡು ಸಾಲಿನ ನಡುವೆ ಕುಂಟೆ ಎಂಬ ಸಾಧನವನ್ನು ಬಳಸಿ ನಡೆಸಲಾಗುತ್ತದೆ. ಇದು ಕಳೆಗಳನ್ನು ಕಿತ್ತು ಹಾಕುತ್ತದೆ. ಅವು ಭತ್ತದ ಪೈರಿನ ಬುಡದಲ್ಲೇ ಒಣಗಿ ಗೊಬ್ಬರವಾಗುತ್ತದೆ. ಭತ್ತದ ಪೈರು ಒಂದು ನಿರ್ಧಿಷ್ಟ ಹಂತಕ್ಕೆ ಬೆಳೆದ ನಂತರ ನೀರು ಹರತೆ ಹೂಡಲಾಗುತ್ತದೆ. ಗದ್ದೆಯಲ್ಲಿ ಸ್ವಲ್ಪ ಪ್ರಮಾಣದ ನೀರು ನಿಲ್ಲಿಸಿ ನಡೆಸುವ ಈ ಹರತೆಯಿಂದ ಕಳೆ ಕಿತ್ತು ಹೋಗಿ ನೀರಿನಲ್ಲಿ ಕೊಳೆತು ಗೊಬ್ಬರವಾಗುತ್ತದೆ.

***

ಶ್ರೀ ಪದ್ಧತಿಯಲ್ಲಿ ನೀರನ್ನು ಕಡಿಮೆ ಬಳಕೆ ಮಾಡುವ ಭತ್ತ ಬೆಳೆಯುವ ವಿಧಾನ ಇನ್ನಷ್ಟು ವೈಜ್ಞಾನಿಕವಾಗಿದೆ. ಈ ಕುರಿತಂತೆ ಮತ್ತೊಂದು ಲೇಖನದಲ್ಲಿ ಚರ್ಚಿಸೋಣ. ಈ ಎಲ್ಲಾ ಪದ್ಧತಿಗಳೂ ಸಾಮಾನ್ಯ ಪ್ರಮಾಣದಲ್ಲಿ ನೀರನ್ನು ಬೇಡುವ ಭತ್ತದ ತಳಿಗಳ ಸಂದರ್ಭದಲ್ಲಿ ಬಳಕೆಯಾಗುತ್ತವೆ. ಇಷ್ಟೊಂದು ನೀರು ಬೇಡದ ತಳಿಗಳೇ ಇವೆ. ಮಲೆನಾಡು ಪ್ರದೇಶದಲ್ಲಿ ಇವನ್ನು 'ಹೊಲ ಭತ್ತ'ಎಂದು ಗುರುತಿಸಲಾಗುತ್ತದೆ. ಕೋಲಾರ ಪ್ರದೇಶದಲ್ಲಿ ಬಳಸುವ ತಳಿಗಳಿಗೂ ಅರೆ ಮಲೆನಾಡು ಪ್ರದೇಶದಲ್ಲಿ ಬಳಸುವ ಹೊಲ ಭತ್ತದ ತಳಿಗಳೂ ಭಿನ್ನ. ಇದೇ ಬಗೆಯ ಕೆಲವು ತಳಿಗಳು ಉತ್ತರ ಕರ್ನಾಟಕದ ಬಯಲು ಪ್ರದೇಶದಲ್ಲೂ ಬಳಕೆಯಾಗುತ್ತವೆ. ಇತ್ತೀಚೆಗೆ ಇಂಥದ್ದೊಂದು ತಳಿಯನ್ನು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯವೂ ಅಭಿವೃದ್ಧಿ ಪಡಿಸಿದೆ.

ನೀರನ್ನು ಕಡಿಮೆ ಬಳಸುವ ತಳಿಗಳು ಮತ್ತು ಕಡಿಮೆ ನೀರು ಬಳಸುವ ಕೃಷಿ ವಿಧಾನ ಜನಪ್ರಿಯವಾಗುವುದಕ್ಕೆ ರೈತರಲ್ಲಿ ಜಾಗೃತಿ ಮೂಡಿಸಬೇಕು ಎಂದು ನಾವೆಲ್ಲರೂ ಹೇಳುತ್ತೇವೆ. ಈ ಕೆಲಸವನ್ನು ಸರಕಾರ ಮತ್ತು ಸರಕಾರೇತರ ಸಂಸ್ಥೆಗಳು ಈಗಾಗಲೇ ಮಾಡುತ್ತಿವೆ. ಹಾಗೆಯೇ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವ ನೀರಿನ ಪ್ರಮಾಣ ಕೂಡಾ ಈ ತಂತ್ರಗಳನ್ನು ರೂಢಿಸಿಕೊಳ್ಳುವಂತೆ ರೈತರನ್ನು ಪ್ರೇರೇಪಿಸುತ್ತಿವೆ. ಈ ಪ್ರಕ್ರಿಯೆಗೆ ವೇಗ ವರ್ಧಕವಾಗಿ ಕೆಲಸ ಮಾಡುವ ಮತ್ತೊಂದು ತಂತ್ರವನ್ನು ಸಾರ್ವಜನಿಕರು ಅಥವಾ ಅಕ್ಕಿಯ ಗ್ರಾಹಕರು ಬಳಸಬಹುದಾಗಿದೆ.

ಈಗಾಗಲೇ ರಾಸಾಯನಿಕಗಳನ್ನು ಬಳಸದ ಸಾವಯವ ವಿಧಾನದಲ್ಲಿ ಬೆಳೆಸಿದ ತರಕಾರಿ, ಆಹಾರ ಧಾನ್ಯಗಳನ್ನು ಖರೀದಿಸುವ ಗ್ರಾಹಕರು ಹೆಚ್ಚಾಗಿದ್ದಾರೆ. ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಬೇಕು. ಹಾಗೆಯೇ ಅಕ್ಕಿಯನ್ನು ಆರಿಸಿಕೊಳ್ಳುವಾಗ ಕಡಿಮೆ ನೀರು ಬಳಸಿ ಕೃಷಿ ಮಾಡಿದ ಅಕ್ಕಿಯನ್ನು ಖರೀದಿಸಲು ಮುಂದಾಗಬೇಕು. ಕಡಿಮೆ ನೀರು ಬಳಸಿರುವ ಅಕ್ಕಿಗಳನ್ನು ಬ್ರಾಂಡ್ ಗಳು ಮಾರುಕಟ್ಟೆಯಲ್ಲಿ ದೊರೆಯಬೇಕು. ಬ್ರಾಂಡಿಂಗ್ ಎಂದರೆ ಇದೇನು ವಾಣಿಜ್ಯ ಸಂಸ್ಥೆಗಳು ಮಾಡುವ ಬ್ರಾಂಡಿಂಗ್ ಅಲ್ಲ. ಸಾವಯವ ಆಹಾರ ಪದಾರ್ಥಗಳಂಥ ಬ್ರಾಂಡಿಂಗ್. ಈ ಬಗೆಯ ಅಕ್ಕಿಗೆ ಬೇಡಿಕೆ ಹೆಚ್ಚಿದರೆ ರೈತರು ಸಹಜವಾಗಿಯೇ ಈ ತಂತ್ರವನ್ನು ಹೆಚ್ಚು ಹೆಚ್ಚು ಬಳಸಲು ಆರಂಭಿಸುತ್ತಾರೆ. ಭತ್ತ ಬೆಳೆಯದ ಆದರೆ ಅನ್ನ ತಿನ್ನುವವರು ನೀರಿನ ಉಳಿತಾಯಕ್ಕೆ ತಮ್ಮ ಮಿತಿಯಲ್ಲಿ ನೀಡುವ ಅತಿದೊಡ್ಡ ಕಾಣಿಕೆ ಇದು.

-ಎನ್ ಎ ಎಂ ಇಸ್ಮಾಯಿಲ್

ಹೊಸ ಕಾಮೆಂಟ್ ಸೇರಿಸಿ

The content of this field is kept private and will not be shown publicly.
CAPTCHA
This question is for testing whether you are a human visitor and to prevent automated spam submissions.
9 + 1 =
Solve this simple math problem and enter the result. E.g. for 1+3, enter 4.