ಅಂಬೋಲಿಯಲ್ಲಿ ಅಂಬಲಿಗೂ ಬರ!

ಧಾರವಾಡ ತಾಲೂಕಿನ ಅಂಬೋಲಿಯಲ್ಲಿ ಜೀವದಾಯಿಯಾಗಿದ್ದ ಕೆರೆ ಒಣಗಿ, ಸೊರಗಿ ಸತ್ತ ಮರದ ಬೊಡ್ಡೆಯನ್ನು ಉದರದಲ್ಲಿಟ್ಟುಕೊಂಡಿರುವ ಮನಕಲಕುವ ದೃಷ್ಯ. ಚಿತ್ರ:ಕೇದಾರ.

ಇದೊಂದು ತಬರನ ಕಥೆ. ನೀರಿಗಾಗಿ ಇಲ್ಲಿನ ಹಳ್ಳಿಗರು ಪಡುತ್ತಿರುವ ಪಾಡು ಚೋಮನ ದುಡಿಗೆ ಸಮ! ಅಂಬೋಲಿಯಲ್ಲಿ ಅಕ್ಷರಶ: ಅಂಬಲಿಗೆ ಬರ ಬಂದಿದೆ.

ಕೇವಲ ನಾಲ್ಕು ವರ್ಷಗಳ ಕೆಳಗೆ ಹಸಿರು ಉಸಿರಾಗಿ, ಸಾಕಷ್ಟು ನೀರು ನಳನಳಿಸಿದ್ದ ಧಾರವಾಡ ತಾಲೂಕಿನ ಅಂಬೋಲಿ ಎಂಬ ಅರೆ ಮಲೆನಾಡಿನ ಹಳ್ಳಿ ಇಂದು ಹನಿ ನೀರಿಗೆ ತತ್ತರಿಸಿದೆ. ದಿನೆ ದಿನೆ ಏರುಗತಿಯತ್ತ ಸಾಗುತ್ತಿರುವ ಬಿಸಿಲಿನ ಬೇಗೆಯಿಂದಾಗಿ ಕಾದು ಕೆಂಡವಾಗಿದೆ ಇಲ್ಲಿನ ನೆಲ. ಮೋಡಗಳು ಸಹ ಈ ಗ್ರಾಮದ ಮೇಲಿಂದ ನಿಲ್ಲದೇ ಓಡುತ್ತಿದ್ದು, ಕೆರೆ, ಕಟ್ಟ ಹಾಗು ಬಾವಿಗಳು ಒಣಗಿ ಬಾಯ್ದೆರೆದು ನಿಂತಿವೆ. ನೆಲದಾಳದ ತಾಪಕ್ಕೆ ಬಿರಿದು ನಿಂತ ನೆಲದ ಬಿರುಕುಗಳು ಸೂಚ್ಯವಾಗಿ ಇಲ್ಲಿನ ಭೂಮಿ, ಜನ-ಜಾನುವಾರುಗಳ ದಾಹವನ್ನು ಕಥೆ ರೂಪದಲ್ಲಿ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತವೆ. 

ಅಂಬೋಲಿ ಸುಮಾರು ೧,೦೦೦ ಜನಸಂಖ್ಯೆಯನ್ನು ಹೊಂದಿರುವ ಗ್ರಾಮ. ಜಾನುವಾರುಗಳ ಸಂಖ್ಯೆ  ಜನ ಸಂಖ್ಯೆಗಿಂತ ೨ ಪಟ್ಟಿದೆ. ಗ್ರಾಮ ಮಟ್ಟದ ಮೂಲಸೌಕರ್ಯಗಳನ್ನು ಸಹ ಹೊಂದಿರದ ನೃತದೃಷ್ಟ ಗ್ರಾಮವದು. ಜನ ಇಲ್ಲಿನ ರಸ್ತೆ, ಗಟಾರು, ಒಳಚರಂಡಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಶೌಚಾಲಯ, ಶಾಲೆ, ಸಮರ್ಪಕ ವಿದ್ಯುತ್, ಎರಡೊಪ್ಪತ್ತಿನ ಕುಡಿಯುವ ನೀರಿಗಾಗಿ ಕುರ್ಚಿ ಪ್ರೇಮಿಗಳ ಕಚೇರಿಗಳನ್ನು ಎಡತಾಕಿ ಜೀವನದ ಪ್ರತಿ ಪ್ರೀತಿಯನ್ನೇ ಕಳೆದುಕೊಂಡಿದ್ದಾರೆ. ಗ್ರಾಮದ ಕರೆಮ್ಮ ಹೇಳುತ್ತಾರೆ.."ಬಟ್ಟಿ ತೊಳ್ಯಾಕ..ನಮ್ಮ ಮೈ ವಾರಕ್ಕೊಮ್ಮೆ ತೊಳಕೊಳ್ಳಾಕ ರಾಡಿ ನೀರು ಸಿಗದಾಂಗ ಆಗೈತಿ. ಎಮ್ಮಿ ಗೊಡ್ಡ ಕೆರಿ ತುದ್ಯಾಗಿನ ರಾಡ್ಯಾಗ ಹೊಳ್ಯಾಡಿ ಮೈ ತೊಳಕೊಳ್ತಾವ, ಎದ್ದು ಬರೋಮುಂದ ಅವನ್ನ ಕುಡದೇಳತಾವ. ನಾವು ಹಂಗ ಮಾಡಬೇಕಿನ್ನ!" 

ಅಳ್ನಾವರ ಪಟ್ಟಣಕ್ಕೆ ಜೀವದಾಯಿಯಾಗಿದ್ದ ದೇವಗಿನಾಲಾ ಕಾಲುವೆ ಬರಿದಾಗಿ ನಿಂತಿದೆ. ೧೭,೦೦೦ ಜನರ ದಾಹ ತೀರಿಸುತ್ತಿತ್ತು ಆ ಕಾಲುವೆ. ಈಗ ಆ ಕಾಲುವೆಯ ಮಧ್ಯೆ ಕಟ್ಟಲಾದ ಅಂಬೋಲಿ ಹಳ್ಳಿಯ ಕುಡಿಯುವ ನೀರು ಪೂರೈಕೆ ಟ್ಯಾಂಕ್ ಐತಿಹಾಸಿಕ ಸ್ಮಾರಕದಂತೆ ನಿಂತಿದೆ! ಕೊನೆಪಕ್ಷ ಹುಲಿಕೇರಿಯ ಇಂದಿರಮ್ಮನ ಟ್ಯಾಂಕ್ ನಿಂದ ಅಳ್ನಾವರ ಪಟ್ಟಣಕ್ಕೆ ನೀರು ಪೂರೈಕೆ ಮಾಡಲಾಗುತ್ತಿತ್ತು. ಅದಕ್ಕೂ ಈಗ ತತ್ವಾರ. ಈ ಹೋಲಿಕೆ ಯಾಕೆ ಅಂದ್ರೆ, ಪಟ್ಟಣದಲ್ಲಿ ತಲೆದೋರಿರುವ ಗಂಭೀರ ಸ್ಥಿತಿಗೆ ಕಣ್ಣು ತೆರೆಯದ ನಮ್ಮ ಅಧಿಕಾರಶಾಹಿ ಹಾಗು ಸ್ವಹಿತಪ್ರತಿನಿಧಿಗಳು ಅಂಬೋಲಿಗೆ ನೀರು ಹರಿಸ್ಯಾರೆಯೇ? ಸರಾಯಿ ಮಾತ್ರ ಸರಾಗವಾಗಿ ಹರಿಸಬಲ್ಲರು ಎಂಬುದು ಇಲ್ಲಿ ಉಲ್ಲೇಖನೀಯ.

ಮತ್ತೆ ಅಂಬೋಲಿಗೆ ಪ್ರಯಾಣ ಬೆಳೆಸೋಣ. ಈ ಗ್ರಾಮದಲ್ಲಿ ಅಲ್ಲಲ್ಲಿ ಕೊರೆಯಲಾದ ೫ ಕೊಳವೆ ಬಾವಿಗಳ ಪೈಕಿ ೪ ಒಣಗಿದ್ದು, ಒಂದು ಮಾತ್ರ ಕರೆಂಟ್ ಇದ್ದಾಗ ಉಲಿಯುತ್ತದೆ. ಜನ ನಾಲ್ಕಾರು ಕಿ.ಮೀ. ಕ್ರಮಿಸಿ ಅಲ್ಲಲ್ಲಿ ಕೆಲ ಹೊಲಗಳಲ್ಲಿ ಕೃಷಿ ಹೊಂಡ ಮಾದರಿಯಲ್ಲಿ ಇಂಗದೇ ಉಳಿದ ನೀರು ಹೊತ್ತು ತಂದು ಬದುಕು ದೂಡುತ್ತಿದ್ದಾರೆ. ಕಳೆದ ೪ ವರ್ಷಗಳಲ್ಲಿ ಕೊನೆಪಕ್ಷ ೧೫ ದಿನಕ್ಕೊಮ್ಮೆಯಾದರೂ ಅಂಬೋಲಿಗೆ ಕುಡಿಯುವ ನೀರು ಹಾಗೂ ಹೀಗೂ ಪೂರೈಕೆಯಾಗುತ್ತಿತ್ತು. ಆದರೆ ಈಗ ಅದೂ ಇಲ್ಲ. ಸಮೀಪದ ಪೇಟೆಗೆ ಹೊಡೆದುಕೊಂಡು ಹೋಗಿ ಜಾನುವಾರುಗಳನ್ನು ಆದಷ್ಟು ಬೇಗ ಮತ್ತೊಬ್ಬರಿಗೆ ಮಾರಿ ಅವುಗಳ ಪಾಪದಿಂದ ತಪ್ಪಿಸಿಕೊಳ್ಳುವುದು ಅಂಬೋಲಿ ಗ್ರಾಮಸ್ಥರ ಪ್ರಾಧಾನ್ಯತಾ ಪಟ್ಟಿಯಲ್ಲಿ ಪ್ರಥಮ. ಕೃಷಿ ಚಟುವಟಿಕೆಗಳಂತೂ ತಟಸ್ಥ. ಜನರಂತೂ ತುತ್ತು ಗಂಜಿಗಾಗಿ ಪಟ್ಟಣದತ್ತ ನಿತ್ಯವೂ ಕೂಲಿಗಾಗಿ ಮುಖ ಮಾಡಿ ನಿಂತಿದ್ದಾರೆ.  

ಅಂಬೋಲಿ ಇಲ್ಲಿ ಪ್ರಾತಿನಿಧಿಕ. ಈ ಪರಿಸ್ಥಿತಿ ಜಿಲ್ಲೆಯ ಬಹುತೇಕ ಹಳ್ಳಿಗಳಲ್ಲಿ ಇನ್ನೂ ಕರುಳು ಹಿಂಡುವಂತಿದೆ. ಅರವಟಗಿ, ಕಿವಿಡಿಬೈಲು, ಕೊಕ್ಕರವಾಡಿ, ಕಂಬಾರಗಣವಿ, ತಡಕೋಡ ಹಾಗು ಉಪ್ಪಿನಬೆಟಗೇರಿ ಅಂತಹ ಕೆಲ ಹಳ್ಳಿಗಳಲ್ಲಿ ಪ್ರಮುಖವಾದವು. ಕುಂದಗೋಳ ತಾಲೂಕಿನ ಕುಡಿಯುವ ನೀರಿನ ಪರಿಸ್ಥಿತಿ ಮುಂದಿನ ೨ ಪಂಚವಾರ್ಷಿಕ ಯೋಜನೆಗಳ ಬಳಿಕವೂ ಸುಧಾರಿಸುವ ಸಾಧ್ಯತೆಗಳು ಕ್ಷೀಣ. ಆದರೆ ಅಲ್ಲಿನ ಗ್ರಾಮಸ್ಥರನ್ನು ನಾನು ಕೇಳಿದಾಗ; ಸಂಬಂಧಪಟ್ಟವರಿಗೆ ಮಾನವೀಯ ಕಾಳಜಿಗಳಿಲ್ಲ. ಸಮಸ್ಯೆಗಳು ಪರಿಹಾರಕಾಣುವುದು ಬೇಕಿಲ್ಲ. ತಾತ್ಕಾಲಿಕ ಯೋಜನೆ, ತಾತ್ಕಾಲಿಕ ಪರಿಹಾರ ಹೀಗೆ ಸದಾಕಾಲ ಹಣ ನುಂಗುವ ಯೋಜನೆಗಳಿಗೆ ಅವರೆಲ್ಲ ಅಂಕಿತ ಹಾಕುತ್ತಾರೆ. ನಿಜಕ್ಕೂ ಕಾಳಜಿ ಇದ್ದಿದ್ದರೆ, ಇಚ್ಛಾಶಕ್ತಿ ಇದ್ದಿದ್ದರೆ ಹಾಗು ಇಲ್ಲಿನ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸುವ ದೊಡ್ಡ ಮನಸ್ಸಿನ ಒಬ್ಬ ಮನುಷ್ಯ ಸಾಕು ಅವರಿಗೆಲ್ಲ ಶಾಶ್ವತವಾಗಿ ನೀರು ಕುಡಿಸಲು ಎಂಬುದು ಬೇಗುದಿಯಿಂದ ಹೊರಹಾಕಲ್ಪಟ್ಟಿತು. `In Journalism you can be an irresponsible commentator' ಎಂಬ ಪ್ರಚಲಿತದಲ್ಲಿರುವ ಮಾತಿದೆ. ‘ಕರುಳರಿಯದ ಸಂಗತಿಗಳನ್ನು ಕಣ್ಣು ಗುರುತಿಸುವುದಿಲ್ಲ’ ಎಂಬ ಮಾತನ್ನು ನಾನು ಇಲ್ಲಿ ಎತ್ತಿಹೇಳಬೇಕು. ನಾಲ್ಕು ಹಳ್ಳಿ ತಿರುಗಿ ಊರಿಗೆ ಬಂದು ತಲುಪುವಲ್ಲಿ ಮುಖದ ಚರ್ಮ ಕೆಂಪಾಗಿ ಕೆತ್ತಿ ಹೋಗಿತ್ತು. ಉರಿ ಬಿಸಿಲಿನ ಝಳಕ್ಕೆ ನನ್ನ ಶಕ್ತಿಯೇ ಉಡುಗಿತ್ತು. ಆದರೆ ನನ್ನಷ್ಟೇ ಜೀವವಿರುವ ಜನ ಅಲ್ಲಿ ಅಂಗೈಯಲ್ಲಿ ಜೀವ ಹಿಡಿದು ಬದುಕಿದ್ದಾರಲ್ಲ?

ಸರಕಾರಿ ಶ್ರಾದ್ಧಕ್ಕೆ ಸೀಮಿತವಾದವರನ್ನು ಬಿಡೋಣ. ಆದರೆ ನಮ್ಮ ಸಮುದಾಯ, ಸ್ವಯಂಸೇವಾ ತಜ್ಞರುಗಳು ಸಹ ನಗರಕೇಂದ್ರಿತರಾಗಿದ್ದು, ಮಾಧ್ಯಮಗಳು ತಲುಪುವಲ್ಲಿ ಮಾತ್ರ ತಮ್ಮ ತಜ್ಞತೆ ದರ್ಶಿಸಲು ಪಣತೊಟ್ಟಂತೆ ನಮ್ಮ ಭಾಗದಲ್ಲಿ ಕಾಣಬರುತ್ತಿದೆ.ಕರೆಮ್ಮ ನನಗೆ ಹೇಳಿ ಕಳುಹಿಸಿದರು.."ನೋಡ್ರಿ..ಹಿಂಗ ಬರೀರಲ್ಲ..ನಮ್ಮ ಮಕ್ಳು ಮರಿಗರೆ ನೀರಿನ ಆಸರೆಯಾಗಬೇಕು. ಹಂಗ ನೀರು ಉಳಿಸೋ, ಬಳಸೊ ಪಾಠ ಹೇಳಾವ್ರ ಒಬ್ಬರನ್ನ ಒಮ್ಮೆ ಕರಕೊಂಡ ಬರ್ರೀ.."   

 

 

Post new comment

The content of this field is kept private and will not be shown publicly.
CAPTCHA
This question is for testing whether you are a human visitor and to prevent automated spam submissions.
3 + 9 =
Solve this simple math problem and enter the result. E.g. for 1+3, enter 4.